

ಬೀದರ್: ಭಾಲ್ಕಿ ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ ಶ್ರೀ ಡಾ.ಬಸವಲಿಂಗ ಪಟ್ಟದೇವರ 73ನೇ ಜನ್ಮದಿನವನ್ನು ನಗರದ ಕೆಪಿ ವಿದ್ಯಾ ಸಂಸ್ಥೆಯಲ್ಲಿ ಆಚರಿಸಲಾಯಿತು. ಸಂಸ್ಥೆ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಪೂಜ್ಯರ 75ನೇ ಜನ್ಮದಿನವನ್ನು ಬಸವ ಅಮೃತ ಮಹೋತ್ಸವ ಹೆಸರಿನಲ್ಲಿ ಭಾರತೀಯ ಬಸವ ಬಳಗದಿಂದ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ 75 ಕಡೆ ಬಸವ ತತ್ವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.
ಹಿರಿಯ ಉದ್ಯಮಿ, ಬಿಜೆಪಿ ಮುಖಂಡ ಗುರುನಾಥ ಕೊಳ್ಳುರ್ ಉದ್ಘಾಟಿಸಿ ಮಾತನಾಡಿ, ಧಾರ್ಮಿಕ, ಸಾಮಾಜಿಕ, ಸಾಹಿತ್ಯಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಕೊಡುಗೆ ಅಪಾರವಾಗಿದೆ. ಪಟ್ಟದ್ದೇವರು ವಚನ ಸಾಹಿತ್ಯ, ಶರಣ ಸಂಸ್ಕೃತಿ ಹಾಗೂ ಬಸವ ಪರಂಪರೆಯನ್ನು ನಾಡಿನ ಉದ್ದಗಲಕ್ಕೂ ಪಸರಿಸುತ್ತಿದ್ದಾರೆ. ಉಚಿತ ಅನ್ನ, ಅಕ್ಷರ, ಆಶ್ರಯದೊಂದಿಗೆ ರಸ್ತೆ ಬದಿ ಬಿಟ್ಟು ಹೋದ ಅನಾಥ, ನಿರ್ಗತಿಕ ಮಕ್ಕಳ ಬಾಳು ಬೆಳಗಲು ಅವಿರತ ಶ್ರಮಿಸುತ್ತಿದ್ದಾರೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಶಿವಕುಮಾರ ಕಟ್ಟೆ, ಪ್ರೌಢಶಾಲೆ ಮುಖ್ಯಗುರು ವಿಜಯಕುಮಾರ ಪಾಟೀಲ್ ಯರನಳ್ಳಿ, ಶಿಕ್ಷಕಿ ಶಂಕ್ರೆಮ್ಮ ಇತರರಿದ್ದರು. ಶಿಕ್ಷಕ ನಾಮದೇವ ಶರ್ಮಾ ನಿರೂಪಣೆ ಮಾಡಿದರು. ವಿದ್ಯಾರ್ಥಿಗಳಿಗೆ ಸಿಹಿ ಮತ್ತು ಹಣ್ಣು ವಿತರಿಸಲಾಯಿತು.