

ಬೆಳಗಾವಿ: ಚಿನ್ನಾಭರಣ ಕೊಟ್ಟು ಆ ಹಣವನ್ನು ತೆಗೆದುಕೊಂಡು ಮರಳಿ ಬರುವಾಗ ದರೋಡೆಕೋರರು ಕಾರ್ ಅಡ್ಡಗಟ್ಟಿ ಅದರಲ್ಲಿದ್ದ ಪ್ರಯಾಣಿಕರಿಗೆ ಪಿಸ್ತೂಲ್ ತೋರಿಸಿ ಹೆದರಿಸಿ, ಅವರ ಬಳಿಯಿದ್ದ 75 ಲಕ್ಷ ರೂ.ನಗದು, ಒಂದು ಲ್ಯಾಪ್‌ಟಾಪ್ ಹಾಗೂ ಅವರ ಕಾರನ್ನು ಅಪಹರಿಸಿಕೊಂಡು ಪರಾರಿಯಾದ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಕೇರಳದ ನಿವಾಸಿ ಚಿನ್ನಾಭರಣ ವ್ಯಾಪಾರಿ ಭಾರತ ಮಾರಗುಡೆ ಅವರು ತಾವು ತಯಾರಿಸಿದ ಚಿನ್ನಾಭರಣಗಳನ್ನು ಅವರ ಅಳಿಯ ಸೂರಜ ಹೋನಮಾನ, ಚಾಲಕ ಆರ್ೀ ಇಲಾಹಿ ಶೇಖ ಹಾಗೂ ಅಜಯ ಸರಗಾರ ಸೇರಿ ಕೊಲ್ಲಾಪುರದ ಗ್ರಾಹಕರಿಗೆ ಕೊಟ್ಟು ಅವರ ಬಳಿಯಿಂದ 75 ಲಕ್ಷ ರೂ.ನಗದು ಹಣ ಪಡೆದು, ವಾಪಸ್ ಕೇರಳಕ್ಕೆ ಮರಳು ತಿದ್ದಾಗ ಇಬ್ಬರು ದರೋಡೆಕೋರರು ಕಾರಿನಲ್ಲಿ ಬಂದು ಇವರ ಕಾರಿಗೆ ಅಡ್ಡ ಹಾಕಿದ್ದಾರೆ. ಈ ವೇಳೆ ಪಿಸ್ತೂಲ್ ತೋರಿಸಿ ನಗದು, ಲ್ಯಾಪ್‌ಟಾಪ್ ಮತ್ತು ಕಾರು ಸಮೇತ ಪರಾರಿಯಾಗಿದ್ದಾರೆ. ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಸೂರಜ ಹೋನಮನೆ ದೂರು ದಾಖಲಿಸಿದ್ದಾರೆ.
ಸಿಪಿಐ ಪ್ರತಿಕ್ರಿಯೆ:
ಶುಕ್ರವಾರ ಬೆಳಗ್ಗೆ ಹರಗಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿನ್ನಾಭರಣ ವ್ಯಾಪಾರಿಯ ಹಣವನ್ನು ಗನ್ ತೋರಿಸಿ ಹೆದರಿಸಿ ಹಣ ದೋಚಿರುವ ಕುರಿತು ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಗುತ್ತಿದೆ ಹಾಗೂ ಕಳ್ಳತನವಾದ ಸ್ಥಳದ ಸುತ್ತಲಿನ ಲಭ್ಯವಿರುವ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಂಕೇಶ್ವರ ಸಿಪಿಐ ಶಿವಶಂಕರ ಅವಜಿ ಪ್ರತಿಕ್ರಿಯೆ ನೀಡಿದ್ದಾರೆ.