ಕೂಡಿಗೆ ಸಹಕಾರ ಸಂಘಕ್ಕೆ 75.60 ಲಕ್ಷ ರೂ. ಲಾಭ

24Kush01
Published on

ಕುಶಾಲನಗರ: ಕೂಡಿಗೆಯಲ್ಲಿರುವ ಕೂಡುಮಂಗಳೂರು ರಾಮೇಶ್ವರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ 2023-24ನೇ ಸಾಲಿನಲ್ಲಿ 75.60 ಲಕ್ಷ ರೂ. ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಹೇಳಿದರು.


ಸಂಘದ ಕಚೇರಿಯಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿ, ಸಂಘದ ವ್ಯಾಪ್ತಿಯಲ್ಲಿ 18 ಗ್ರಾಮಗಳಿದ್ದು, ಅದರಲ್ಲಿ ಎಲ್ಲ ಗ್ರಾಮಗಳು ಒಳಗೊಂಡಂತೆ 2023-24ನೇ ಸಾಲಿನಲ್ಲಿ 4228 ಸದಸ್ಯರು ಇದ್ದಾರೆ. ಸದಸ್ಯರ ಪಾಲು ಬಂಡವಾಳ 36.08 ಕೋಟಿ ರೂ. ಇದೆ. ಇದರಲ್ಲಿ 22.57 ಕೋಟಿ ರೂ.ಠೇವಣಿ ಸಂಗ್ರಹವಿದೆ. ಸಂಘದಲ್ಲಿ ದುಡಿಯುವ ಬಂಡವಾಳ 42.84 ಕೋಟಿ ರೂ., ಕೃಷಿ, ಕೃಷಿಯೇತರ ಮತ್ತು ಇತರ ವ್ಯಾಪಾರ-ವಹಿವಾಟುಗಳಿಂದ, ರೈತರಿಗೆ ಕೃಷಿ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಸಂಘ ಉತ್ತಮ ಸ್ಥಾನದಲ್ಲಿ ಇದೆ ಎಂದು ತಿಳಿಸಿದರು.


ಸಂಘ ಮುಂದಿನ ದಿನಗಳಲ್ಲಿ ರೈತರ ಅಭಿವೃದ್ಧಿಗೆ ಪೂರಕವಾದ ಹೊಸ ಯೋಜನೆಗಳನ್ನು ಹಮ್ಮಿಕೊಂಡು ರೈತರ ದಾಖಲೆಗಳಿಗೆ ಅನುಗುಣವಾಗಿ ಹೊಸ ಸಾಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.


ಈ ಸಾಲಿನಲ್ಲಿಯೂ ಸಂಘ ಆಡಿಟ್ ಗ್ರೇಡ್‌ನಲ್ಲಿ ಎ ಶ್ರೇಣಿ ಹೊಂದಿದೆ ಎಂದು ಸಂಘದ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮೀನಾ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net