

ಬಳ್ಳಾರಿ : ಡಾ.ಬಿ.ಆರ್.ಅಂಬೇಡ್ಕರ್ ಅವರಂತೆ ಆಳವಾದ ಮತ್ತು ನಿರಂತರ ಅಧ್ಯಯನದಿಂದ ಮಾತ್ರ ಇಂದಿನ ವಿದ್ಯಾರ್ಥಿಗಳು ಸಾಧನೆ ಮಾಡಲು ಲು ಸಾಧ್ಯವೆಂದು ಕುಲಸಚಿವ ಎಸ್.ಎನ್.ರುದ್ರೇಶ್ ಹೇಳಿದರು.
ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಕೋಶ ಸಹಯೋಗದೊಂದಿಗೆ ಭಾನುವಾರ ಹಮ್ಮಿಕೊಂಡಿದ್ದ 74ನೇ ರಾಷ್ಟ್ರೀಯ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರಂತೆ ಆದರ್ಶ ಮಹಾನ್ ವ್ಯಕ್ತಿಗಳಾಗಲು ಇಂದಿನ ಯುವ ವಿದ್ಯಾರ್ಥಿಗಳು ಸಹಿಷ್ಣುತೆ ಗುಣವನ್ನು ಬೆಳೆಸಿಕೊಳ್ಳುವುದು ಬಹು ಮುಖ್ಯ ಎಂದು ಮಾರ್ಗಸೂಚಿಸಿದರು. ಸಂವಿಧಾನದಲ್ಲಿನ ಪ್ರಸ್ತಾವನೆಯ ವಿಶೇಷ ಪದಗಳಾದ ಜಾತ್ಯಾತೀತ, ಸಮಾಜವಾದಿ, ಗಣರಾಜ್ಯ ಇವುಗಳ ಬಗ್ಗೆ ತಮ್ಮ ವಿಚಾರಗಳನ್ನು ತಿಳಿಸಿದರು.
ಅಲ್ಲದೆ ಸಂವಿಧಾನಕ್ಕೆ ವಚನ ಸಾಹಿತ್ಯದ ತಾತ್ವಿಕ ಸ್ಪರ್ಶದ ಮಜಲುಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ರಾಜ್ಯಶಾಸ್ತ್ರ ಅಧ್ಯಯನ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ. ಮೋಹನದಾಸ್ ಮಾತನಾಡಿ, ಭಾರತವು ಪ್ರಜಾಸತ್ತಾತ್ಮಕ ನೆಲೆಯಲ್ಲಿ ನಮ್ಮ ಸಂವಿಧಾನವನ್ನು ಕೇಂದ್ರ ಸರ್ಕಾರದ ಬಲಿಷ್ಠ ಒಕ್ಕೂಟ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ನಮ್ಮ ಸಂವಿಧಾನವು ತನ್ನದೆ ಆದ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಸಂವಿಧಾನಕ್ಕೆ ಹಲವಾರು ತಿದ್ದುಪಡಿಗಳನ್ನು ಮಾಡಿಕೊಳ್ಳುವುದರ ಮೂಲಕ ಮಾನವನ ದೈನಂದಿನ ಜೀವನಕ್ಕೆ ಸಂವಿಧಾನವು ಸಹಕಾರಿಯಾಗಿದೆ. ಕಾಯಿದೆ, ಕಾನೂನುಗಳ ಸಹಾಯಕವಾಗಿರುವಂತಹ ರಾಜ್ಯ ನಿರ್ದೇಶಕ ತತ್ವಗಳಾದ ಉದಾರವಾದಿ, ಸಮಾಜವಾದಿ, ಗಾಂಧಿ ತತ್ವಗಳ ಬಗ್ಗೆ ಮತ್ತು ಸಂವಿಧಾನ ರಚನಾ ಸಭೆಯ ಮಹತ್ವ ಹಾಗೂ ಮೂಲಭೂತ ಕರ್ತವ್ಯಗಳು ನಮ್ಮಲ್ಲರಿಗೂ ಹೇಗೆ ಉಪಯುಕ್ತವಾಗಿವೆಂಬುದನ್ನು ಪ್ರಸ್ತುತಪಡಿಸಿದರು.
ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ವಿಜಯಕುಮಾರ್.ಬಿ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು. ಪ್ರಾಧ್ಯಾಪಕರಾದ ರಾಬರ್ಟ್ ಜೋಸ್, ಶಶಿಕಾಂತ ಮಜ್ಜಿಗಿ, ಲೋಕೇಶ್.ಕೆ.ಎಸ್., ಉದಯಕುಮಾರ ಗೌರಿಮಾನಸ, ಶಶಿಧರ, ಚಾಂದಬಾಷ, ನಾಗಭೂಷಣ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.