

ಕೂಡ್ಲಿಗಿ: ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶ ಹಾಗೂ ಮಳೆ ನೀರು ವ್ಯರ್ಥವಾಗುವುದನ್ನು ತಪ್ಪಿಸಲು ಚೆಕ್‌ಡ್ಯಾಂಗಳ ನಿರ್ಮಾಣ ಅಗತ್ಯವಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ತಾಲೂಕಿನ ನರಸಿಂಹಗಿರಿ ಗ್ರಾಮದಲ್ಲಿ ಕೆಕೆಆರ್‌ಡಿಬಿಯ 2.10 ಕೋಟಿ ರೂ. ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ಅಂತರ್ಜಲ ಅಭಿವೃದ್ಧಿ ವಿಭಾಗದ ಸಹಯೋಗದಲ್ಲಿ ಎರಡು ಚೆಕ್‌ಡ್ಯಾಂಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಭಾನುವಾರ ಮಾತನಾಡಿದರು.
ಹಿಂದುಳಿದ ಕೂಡ್ಲಿಗಿ ತಾಲೂಕಿನ ರೈತರ ಬಹು ದಿನಗಳ ಕನಸಿನ ಯೋಜನೆಯಾದ 74 ಕೆರೆಗಳಿಗೆ ನೀರು ತುಂಬಿಸುವ ಪ್ರಕ್ರಿಯೆಯನ್ನು ಅತಿ ಶೀಘ್ರದಲ್ಲಿ ಕಾರ್ಯಗತಗೊಳಿಸಲಾಗುವುದು. ಕೂಡ್ಲಿಗಿ ಕ್ಷೇತ್ರದ ಎಲ್ಲ ರೈತರ ಜಮೀನುಗಳಿಗೆ ನೀರನ್ನು ಹರಿಯುವಂತಾಗಬೇಕು. ರೈತರು ಸುಖವಾಗಿ ಹಾಗೂ ಧೈರ್ಯದಿಂದ ಬದುಕು ನಡೆಸಬೇಕು ಎನ್ನುವ ಸಂಕಲ್ಪ ಇಟ್ಟು ಕೊಂಡಿದ್ದೇನೆ. ಈ ಯೋಜನೆಯಿಂದ ರೈತರು ನೆಮ್ಮದಿಯ ಬದುಕನ್ನ ಸಾಗಿಸಲಿದ್ದಾರೆ ಎಂದರು.
ಪಿಡಿಒ ಕೃಷ್ಣ ನಾಯ್ಕ, ಗ್ರಾಪಂ ಸದಸ್ಯ ಜಿ.ಸೋಮಪ್ಪ, ಕೆ.ತಿಪ್ಪೇಸ್ವಾಮಿ, ನಿಂಗಪ್ಪ, ಕೆ.ಶ್ರೀನಿವಾಸ್, ಜಿ.ಕುಶ, ಬಣಕಾರ ಚಂದ್ರಪ್ಪ, ಕೆ.ಜಯಣ್ಣ, ಜಿ.ಶರಣೇಶ್, ಶೀನಪ್ಪ ಇತರರಿದ್ದರು.