73 ನಿಮಿಷದಲ್ಲಿ 700 ಶ್ಲೋಕ ಪಠಣ, ಕೊರ್ಲಗುಂದಿ ಇಸ್ಕಾನ್ ಆಶ್ರಮದ ಮುಖ್ಯಸ್ಥ ಕೃಷ್ಣಚಂದ್ರದಾಸ್ ಸಾಧನೆ

Krishna Chandradas Korlagundi
Published on

ಬಳ್ಳಾರಿ: ಕೇವಲ 73 ನಿಮಿಷದಲ್ಲಿ ಭಗವದ್ಗೀತೆಯ 700 ಶ್ಲೋಕ ಪಠಿಸುವ ಮೂಲಕ ಕೊರ್ಲಗುಂದಿ ಗ್ರಾಮದ ಇಸ್ಕಾನ್ ಆಶ್ರಮದ ಮುಖ್ಯಸ್ಥ ಕೃಷ್ಣ ಚಂದ್ರದಾಸ್ (ಚಂದ್ರಮೌಳಿ ವರ್ಮಾ) ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿದ್ದಾರೆ.

ಹಲವರಿಗೆ ಭಗವದ್ಗೀತೆಯ ಮಹತ್ವ ತಿಳಿದಿಲ್ಲ. ಪ್ರಪಂಚದಲ್ಲಿ ದಿನನಿತ್ಯ ಅನಾಚಾರ, ದುಷ್ಕೃತ್ಯಗಳು ನಡೆಯುತ್ತಿವೆ. ಇಂಥ ಸನ್ನಿವೇಶದಲ್ಲಿ ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ನಡೆದು ಜೀವನ ರೂಪಿಸಿಕೊಳ್ಳಲು ಭಗವದ್ಗೀತೆಯ ಸಾರ ಅರಿಯಬೇಕು. ಹೀಗಾಗಿ ಜಾಗೃತಿ ಮೂಡಿಸಲು ಕೊರ್ಲಗುಂದಿಯಲ್ಲಿ ಎರಡು ವರ್ಷಗಳ ಹಿಂದೆ ಆಶ್ರಮ ಸ್ಥಾಪಿಸಿ ಧರ್ಮ ಬೋಧನೆ ಮಾಡಲಾಗುತ್ತಿದೆ. ಜ.27ರಂದು ಕೊರ್ಲಗುಂದಿ ಗ್ರಾಮದಲ್ಲಿ ಸಂಸ್ಕೃತ ಶಿಕ್ಷಕರ ಮುಂದೆ ಕೇವಲ 73 ನಿಮಿಷದಲ್ಲಿ 700 ಶ್ಲೋಕ ಪಠಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ನಿರ್ಮಿಸಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಕೃಷ್ಣ ಚಂದ್ರದಾಸ್ ವಿವರಿಸಿದರು. ಭಗವಾನ್ ಕೃಷ್ಣ ಭಗವದ್ಗೀತೆಯಲ್ಲಿ ನಿತ್ಯ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸುವುದರ ಜತೆಗೆ ನೆಮ್ಮದಿ ಕಂಡುಕೊಳ್ಳುವ ಬಗೆ ವಿವರಿಸಿದ್ದಾರೆ. ದೇವರ ಉಪದೇಶಗಳನ್ನು ಅನುಸರಿಸಲು ಜಾತಿ, ಮತದ ಹಂಗಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಭಗವದ್ಗೀತೆಯ ಮಹತ್ವ ಅರಿಯಬೇಕು ಎಂದರು. ಆಶ್ರಮದ ಭಕ್ತರಾದ ಪ್ರದೀಪ್ ಹರಪನಹಳ್ಳಿ, ಪ್ರಕಾಶರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net