

ಚಿಕ್ಕಮಗಳೂರು: ಕಾಫಿನಾಡಲ್ಲಿ ಕರೊನಾ ಎರಡನೇ ಅಲೆಯ ತೀವ್ರತೆ ದಿನೇ ದಿನೇ ಹೆಚ್ಚುತ್ತಿದ್ದು, ಶುಕ್ರವಾರ 73 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಗುರುವಾರ 62 ಮಂದಿಯಲ್ಲಿ ಸೋಂಕು ಕಂಡು ಬಂದಿತ್ತು. ಶುಕ್ರವಾರ ಪತ್ತೆಯಾದವರಲ್ಲಿ ಹೋಂ ಐಸೊಲೇಶನ್‍ನಲ್ಲಿ 65 ಮಂದಿ ಹಾಗೂ ಡಿಸಿಎಚ್‍ಸಿನಲ್ಲಿ 7 ಹಾಗೂ ಖಾಸಗಿ ಅಸ್ಪತ್ರೆಯಲ್ಲಿ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ 32 ಮಂದಿ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ 458 ಸಕ್ರಿಯ ಪ್ರಕರಣಗಳಿವೆ.
ಕರೊನಾ ಎರಡನೇ ಅಲೆ ಜಿಲ್ಲೆಯ ಜನರಲ್ಲಿ ತೀವ್ರ ಅತಂಕ ಮೂಡಿಸಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕ ಹಾಗೂ ತಪಾಸಣೆಗೆ ಅಗತ್ಯ ಮಾದರಿ ನೀಡಿದವರಲ್ಲಿ ಸಹ ಅತಂಕದ ಛಾಯೆ ಕಂಡು ಬರುತ್ತಿದೆ. ಸೋಂಕು ಇರುವವರನ್ನು ತಕ್ಷಣವೇ ಆರೋಗ್ಯ ಇಲಾಖೆ ಸಂಪರ್ಕಿಸಿ ಹೋಂ ಐಸೊಲೇಶನ್ ಅಥವಾ ಅಸ್ಪತ್ರೆಗೆ ಬರುವಂತೆ ಸೂಚನೆ ನೀಡಲಾಗುತ್ತಿದೆ. ಅದರೆ ವರದಿ ನೆಗೆಟಿವ್ ಬಂದವರಿಗೆ ವರದಿಯ ಬಗ್ಗೆ ಮಾಹಿತಿ ಪಡೆಯಲು ಕೊಂಚ ಹಿನ್ನಡೆಯಾಗುತ್ತಿರುವುದರಿಂದ ಎರಡ್ಮೂರು ದಿನ ಭಯದಿಂದಲೇ ಕಾಲ ಕಳೆಯುವಂತಾಗಿದೆ.