ಒಂದೇ ದಿನ 729 ಜನರಿಗೆ ಕರೊನಾ ; ಅಧಿಕಾರಿಗಳು ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡದಂತೆ ಡಿಸಿ ಆದೇಶ

12TMK_Corona_DC
Published on

ತುಮಕೂರು: ಜಿಲ್ಲೆಯಲ್ಲಿ ಕರೊನಾ ಸ್ಫೋಟವಾಗಿದ್ದು ಸೋಂಕು ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಿದೆ.

ಜಿಲ್ಲೆಯ ಯಾವುದೇ ಅಧಿಕಾರಿ ಜಿಲ್ಲಾಡಳಿತದ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡಬಾರದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸೋಂಕು ಪ್ರಕರಣಗಳ ಪಾಸಿಟಿವಿಟಿ ದರ ಶೇ.13.4ರಷ್ಟಿದೆ, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ಸೋಂಕು ಹರಡುವಿಕೆಯನ್ನು ತಡೆಯಬೇಕಿದೆ ಎಂದರು. ಜಿಲ್ಲೆಯಲ್ಲಿ ಶೇ.100 ಜನರಿಗೆ ಲಸಿಕೆ ಹಾಕಿಲ್ಲದಿರುವುದು ಬೇಸರದ ವಿಷಯವಾಗಿದ್ದು, ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುವ ಮುನ್ನ ಎಲ್ಲರಿಗೂ ಎರಡೂ ಡೋಸ್ ಲಸಿಕೆ ನೀಡುವ ಮೂಲಕ ಶೇ.100 ಲಸಿಕಾಕರಣ ಪೂರ್ಣಗೊಳಿಸಬೇಕು ಎಂದರು.

ಶಾಲೆಗಳಲ್ಲಿ ಕರೊನಾ ಸೋಂಕು ಹೆಚ್ಚುತ್ತಿದ್ದು, ಮಕ್ಕಳು ಕಡ್ಡಾಯವಾಗಿ ಕರೊನಾ ನಿಯಮ ಪಾಲಿಸುವುದರ ಜತೆಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಬೇಕು ಎಂದರು. ಡಿಎಚ್‌ಒ ಡಾ.ನಾಗೇಂದ್ರಪ್ಪ ಮಾತನಾಡಿ, ಜಿಲ್ಲೆಯಲ್ಲಿ 888 ಕರೊಬಾ ಸಕ್ರಿಯ ಪ್ರಕರಣಗಳಿದ್ದು, ಬುಧವಾರ 729 ಪ್ರಕರಣ ವರದಿಯಾಗಿವೆ. ಜಿಲ್ಲೆಯಲ್ಲಿ ಶೇ. 98 ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಎರಡನೇ ಡೋಸ್ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದರು.

15-18 ವರ್ಷದೊಳಗಿನ ಶೇ.48 ಮಕ್ಕಳಿಗೆ ಲಸಿಕಾಕರಣ ಪೂರ್ಣಗೊಂಡಿದೆ ಎಂದು ತಿಳಿಸಿದರು. ಸಭೆಯಲ್ಲಿ ಹಿರಿಯ ಅಧಿಕಾರಿಗಳು ಇದ್ದರು.

ಸಂಕ್ರಾಂತಿ, ಏಕಾದಶಿ: ಸಾಮೂಹಿಕ ಆಚರಣೆಗೆ ನಿರ್ಬಂಧ ಜನರು ಗುಂಪು ಸೇರುವುದರಿಂದ ಕರೊನಾ ಸೋಂಕು ಹರಡುವಿಕೆ ಹೆಚ್ಚಾಗುತ್ತಿದ್ದು, ಈ ಪ್ರಮಾಣ ನಿಯಂತ್ರಿಸುವ ಸಲುವಾಗಿ ಜ.13ರಂದು ನಡೆಯಲಿರುವ ವೈಕುಂಠ ಏಕಾದಶಿ ಹಾಗೂ ಜ.15ರಂದು ನಡೆಯುವ ಸಂಕ್ರಾಂತಿ ಹಬ್ಬವನ್ನು ಸಾಮೂಹಿಕವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡಿ ಆಚರಣೆಗೆ ಜಿಲ್ಲಾಡಳಿತ ನಿರ್ಬಂಧ ಮಾಡಿದೆ.

ವೈಕುಂಠ ಏಕಾದಶಿ ಹಾಗೂ ಮಕರ ಸಂಕ್ರಾಂತಿ ಹಬ್ಬಗಳ ಅಂಗವಾಗಿ ದೇವಾಲಯದ ಶಾಸ್ತ್ರ ಸಂಪ್ರದಾಯದಂತೆ ದೇವಾಲಯಗಳ ಒಳ ಆವರಣದಲ್ಲಿ ದೈನಂದಿನ ಪೂಜಾ ಕೈಂಕರ್ಯಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಲಸಿಕೆ ಪಡೆದ 50 ಜನರಿಗೆ ಒಂದು ಬಾರಿಗೆ ದರ್ಶನಕ್ಕೆ ಅವಕಾಶವಿದೆ, ಪೂಜಾ ಸೇವೆಗೆ ಅವಕಾಶವಿಲ್ಲ.

ಪ್ರತಿ ಗಂಟೆಗೂ ಸಂಖ್ಯೆ ಏರಿಕೆ: ಜಿಲ್ಲೆಯಲ್ಲಿ ಕರೊನಾ ಸ್ಫೋಟ ಮುಂದುವರಿದಿದ್ದು, ಬುಧವಾರ ದಾಖಲೆಯ 594 ಜನರಿಗೆ ಕರೊನಾ ದೃಢವಾಗಿದೆ ಎಂದು ಆರೋಗ್ಯ ಇಲಾಖೆ ದಾಖಲೆ ತಿಳಿಸಿದರೆ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಡಿಎಚ್‌ಒ 729 ಜನರಿಗೆ ಕರೊನಾ ದೃಢವಾಗಿದೆ ಎಂದು ಹೇಳಿಕೆ ನೀಡಿದ್ದು ಸಂಖ್ಯೆ ಪ್ರತಿ ಗಂಟೆಗೂ ದುಪ್ಪಟ್ಟಾಗುತ್ತಿದೆ. ತುಮಕೂರು 288, ಶಿರಾ 72, ತಿಪಟೂರು 61, ಕೊರಟಗೆರೆ 47, ಪಾವಗಡ 34, ಗುಬ್ಬಿ 25, ಕುಣಿಗಲ್ 25, ಮಧುಗಿರಿ 5, ತುರುವೇಕೆರೆ 22 ಹಾಗೂ ಚಿಕ್ಕನಾಯಕನಹಳ್ಳಿ 15 ಒಟ್ಟು 332 ಜನರಿಗೆ ಸೋಂಕು ದೃಢವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net