

ಮುಂಡರಗಿ: ಶಿವಮೊಗ್ಗ, ಹಾವೇರಿ ಮೊದಲಾದ ಕಡೆ ಮಳೆ ಸುರಿಯುತ್ತಿರುವ ಹಿನ್ನೆಲೆ ತಾಲೂಕಿನ ತುಂಗಭದ್ರಾ ನದಿಗೆ ಶುಕ್ರವಾರ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಹಮ್ಮಿಗಿ ಸಮೀಪದ ಸಿಂಗಟಾಲೂರು ಬ್ಯಾರೇಜ್‌ನ 26 ಗೇಟ್‌ಗಳ ಪೈಕಿ 8 ಗೇಟ್‌ಗಳ ಮೂಲಕ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.
ಸಿಂಗಟಾಲೂರು ಬ್ಯಾರೇಜ್‌ನಿಂದ ಶುಕ್ರವಾರ 72,218 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ. ಬ್ಯಾರೇಜ್ 3.12 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಹಿನ್ನೀರಿನಿಂದ ತಾಲೂಕಿನ ಗುಮ್ಮಗೋಳ, ಬಿದರಹಳ್ಳಿ, ವಿಠ್ಠಲಾಪುರ ಮತ್ತು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಅಲ್ಲಿಪುರ ಗ್ರಾಮಗಳು ಮುಳುಗಡೆ ಪ್ರದೇಶಕ್ಕೆ ಒಳಪಟ್ಟಿವೆ. ನಾಲ್ಕು ಗ್ರಾಮಗಳು ಸಂಪೂರ್ಣ ಸ್ಥಳಾಂತರಗೊಳ್ಳದ ಕಾರಣದಿಂದ ಬ್ಯಾರೇಜ್‌ನಲ್ಲಿ 1.90 ಟಿಎಂಸಿ ನೀರು ಮಾತ್ರ ಸಂಗ್ರಹಿಸಲಾಗುತ್ತಿದೆ. ಹೀಗಾಗಿ ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.
ಅ.11ರಂದು 49,300 ಕ್ಯೂಸೆಕ್, ಅ.12ರಂದು 46,580 ಕ್ಯೂಸೆಕ್, ಅ.13ರಂದು 61,695 ಕ್ಯೂಸೆಕ್ ನೀರು ಹರಿದು ಬಂದಿತ್ತು. ನಂತರದಲ್ಲಿ ಮೂರ‌್ನಾಲ್ಕು ದಿನ ಪ್ರತಿದಿನ 24,967ಕ್ಯೂಸೆಕ್ ನಿಂದ 28,780 ಕ್ಯೂಸೆಕ್‌ವರೆಗೂ ನೀರು ಹರಿದು ಬಂದಿತ್ತು. ಶುಕ್ರವಾರ ಮಾತ್ರ ಹೆಚ್ಚು ಪ್ರಮಾಣದಲ್ಲಿ ಹರಿದು ಬಂದಿದೆ.
ಶಿವಮೊಗ್ಗ, ಹಾವೇರಿ ಮತ್ತಿತರ ಕಡೆ ಮಳೆ ಸುರಿಯುತ್ತಿರುವದರಿಂದಾಗಿ ತುಂಗಭದ್ರಾ ನದಿಗೆ ನೀರು ಹರಿದು ಬರುತ್ತಿದ್ದು, ಶುಕ್ರವಾರ 72,218ಕ್ಯೂಸೆಕ್ ನೀರು ಬಂದಿದೆ. ಬ್ಯಾರೇಜ್‌ನಲ್ಲಿ 1.90 ಟಿಎಂಸಿ ಮಾತ್ರ ಸಂಗ್ರಹಿಸಿಟ್ಟುಕೊಂಡು ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಮಳೆ ಕಡಿಮೆಯಾಗುವ ಲಕ್ಷಣವಿದ್ದು ಒಳಹರಿವು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಸಿಂಗಟಾಲೂರು ಬ್ಯಾರೇಜ್ ಎಇಇ ರಾಘವೇಂದ್ರ ಎಚ್.ಸಿ. ತಿಳಿಸಿದ್ದಾರೆ.