ಕರೊನಾ ಮುಕ್ತದತ್ತ ಕಲ್ಪತರು ನಾಡು : 905ರಲ್ಲಿ 720 ಜನರಿಗೆ ನೆಗೆಟಿವ್

corona
Published on

ತುಮಕೂರು: ಕರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಇದುವರೆಗೂ ಜಿಲ್ಲೆಯ 905 ವ್ಯಕ್ತಿಗಳ ಗಂಟಲುಸ್ರಾವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು 720 ಮಾದರಿಗಳು ನೆಗೆಟಿವ್ ಬಂದಿವೆ. ಜಿಲ್ಲೆ ಕರೊನಾ ಮುಕ್ತವಾಗಿದ್ದು 360 ಮಂದಿಯನ್ನು ಐಸೋಲೇಷನ್‌ನಲ್ಲಿಡಲಾಗಿದೆ.

ಮಾ.27ಕ್ಕೆ ಶಿರಾ ಮೂಲದ ವೃದ್ಧ ಕರೊನಾಕ್ಕೆ ಬಲಿಯಾಗಿದ್ದು ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ 13 ವರ್ಷದ ಪುತ್ರನಿಗೂ ಸೋಂಕು ತಗುಲಿತ್ತು. ಸೋಂಕಿತ ಬಾಲಕ ಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆ ಪಡೆದು ಗುಣಮುಖನಾಗಿ ಮನೆಗೆ ಮರಳಿದ್ದಾನೆ. ಒಟ್ಟಾರೆ ಜಿಲ್ಲೆಯಲ್ಲಿ 2 ಪ್ರಕರಣಗಳು ಪಾಸಿಟಿವ್ ಬಂದಿದ್ದು, ಒಬ್ಬರು ಮೃತಪಟ್ಟಿದ್ದರೆ, ಮತ್ತೊಬ್ಬ ಗುಣಮುಖನಾಗಿದ್ದಾನೆ. ಇನ್ನೂ 178 ವ್ಯಕ್ತಿಗಳ ತಪಾಸಣೆಯ ವರದಿಯನ್ನು ನಿರೀಕ್ಷಿಸಲಾಗಿದೆ.

ಈವರೆಗೆ ಜಿಲ್ಲೆಗೆ ಬೇರೆಬೇರೆ ದೇಶಗಳಿಂದ 480 ಮಂದಿ ಬಂದಿದ್ದು ಅವರನ್ನು ತೀವ್ರ ನಿಗಾದಲ್ಲಿಡಲಾಗಿದೆ. ಈ ಪೈಕಿ 9 ಮಂದಿಯನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಒಟ್ಟು 360 ಮಂದಿಯನ್ನು ಐಸೋಲೇಷನ್‌ನಲ್ಲಿ ಇಡಲಾಗಿದ್ದು ಈಗಾಗಲೇ 361 ಜನರ 28 ದಿನಗಳ ಹೋಂ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. 5 ಮಾದರಿಗಳು ತಿರಸ್ಕೃತಗೊಂಡಿದ್ದು 178 ವ್ಯಕ್ತಿಗಳ ತಪಾಸಣೆಯ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಡಿಎಚ್‌ಒ ಡಾ.ಬಿ.ಆರ್.ಚಂದ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಮಿಕರನ್ನು ವಜಾಗೊಳಿಸುವಂತಿಲ್ಲ: ಎಲ್ಲ ಸಾರ್ವಜನಿಕ /ಖಾಸಗಿ ಸಂಸ್ಥೆಗಳ ಉದ್ಯೋಗದಾತರು ತಮ್ಮ ಉದ್ಯೋಗಿಗಳನ್ನು, ವಿಶೇಷವಾಗಿ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸದಂತೆ ಹಾಗೂ ವೇತನ ಕಡಿತಗೊಳಿಸದಂತೆ ರಾಜ್ಯದ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ. ಯಾವುದೇ ಕೆಲಸಗಾರರು ಈ ಅವಧಿಯಲ್ಲಿ ರಜೆ ತೆಗೆದುಕೊಂಡಿದ್ದಲ್ಲಿ ಅವರ ವೇತನದಲ್ಲಿ ಯಾವುದೇ ಪರಿಣಾಮಕಾರಿ ಕಡಿತವಿಲ್ಲದೆ, ಅಂತಹ ಕೆಲಸಗಾರರನ್ನು ಕರ್ತವ್ಯದಲ್ಲಿದ್ದಾರೆಂದು ಪರಿಗಣಿಸಬೇಕು ಎಂದು ಕಾರ್ಮಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಆದೇಶದಲ್ಲಿ ತಿಳಿಸಿದ್ದಾರೆ.

ತುಮಕೂರು ಸ್ವಚ್ಛತಾ ಕಾರ್ಮಿಕರಿಗೆ ಉಚಿತ ಸೋಪು: ತುಮಕೂರು ನಗರವನ್ನು ಪ್ರತಿನಿತ್ಯ ಸ್ವಚ್ಛಗೊಳಿಸುವ ಸ್ವಚ್ಛತಾ ಕಾರ್ಮಿಕರಿಗೆ ತಲಾ ಒಂದೊಂದು ಸಂತೂರ್ ಸೋಪನ್ನು ಉಚಿತವಾಗಿ ವಿತರಿಸಲಾಗಿದೆ. ಪಾಲಿಕೆಯಲ್ಲಿ ಒಟ್ಟು 507 ಜನ ಪೌರಕಾರ್ಮಿಕರಿದ್ದಾರೆ. 50 ಜನ ಲೋಡರ್‌ಗಳು ಹಾಗೂ 96 ಜನ ಹೆಲ್ಪರ್‌ಗಳು ಕಾರ್ಯನಿರ್ವಹಿಸುತ್ತಿದ್ದು ಒಟ್ಟಾರೆ 653 ಜನರು ಸ್ವಚ್ಛತಾ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು ವಿಪ್ರೋ ಕಂಪನಿ ಸೋಪು ಪೂರೈಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net