720 ಕೋಟಿ ರೂ. ಬೆಳೆ ಸಾಲ ವಿತರಣೆ ಗುರಿ

27 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಳೆದ ಸಾಲಿನಲ್ಲಿ 1,03,651 ರೈತ ಸದಸ್ಯರಿಗೆ 657.30 ಕೋಟಿ ರೂ. ಬೆಳೆಸಾಲ ವಿತರಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 720 ಕೋಟಿ ರೂ. ಬೆಳೆಸಾಲ ಹಾಗೂ 48 ಕೋಟಿ ರೂ. ಮಾಧ್ಯಮಿಕ ಕೃಷಿ ಸಾಲ ವಿತರಿಸುವ ಗುರಿ ಇದೆ ಎಂದು ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ (ಕೆಸಿಸಿ) ಬ್ಯಾಂಕ್ ನೂತನ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಆಧುನಿಕ ತಂತ್ರಜ್ಞಾನ ಅಳವಡಿಕೆ ಮೂಲಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿರುವ ಬ್ಯಾಂಕಿನ ನೂತನ ಆಡಳಿತ ಮಂಡಳಿ ಪಾರದರ್ಶಕ ಹಾಗೂ ಕ್ರಿಯಾಶೀಲ ಕಾರ್ಯಗಳಿಂದ ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಹೊಸ ಕ್ರಾಂತಿ ಹುಟ್ಟುಹಾಕಲಿದೆ. ಯುವಕರಿಗೆ ಉದ್ಯೋಗ, ಕೃಷಿ ಹಾಗೂ ಕೃಷಿ ಸಂಬಂಧಿತ ಕಾರ್ಯಚಟುವಟಿಕೆಗಳಿಗೆ ಸಾಲ ಯೋಜನೆ ಸಿಗುವಂತೆ ಹೊಸ ಯೋಜನೆ ರೂಪಿಸಲಾಗುವುದು ಎಂದರು.
ರೈತರ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ನೆರವಿನ ಜತೆಗೆ ಕೃಷಿಯೇತರ ಸಾಲ ಯೋಜನೆಯಡಿ ಹೆಚ್ಚಿನ ಆದಾಯ ತರುವ ಕೃಷಿಯೇತರ ಸಾಲಗಳಾದ ವೇತನ ಆಧಾರಿತ, ಬಂಗಾರ ಆಭರಣಗಳ ಮೇಲಿನ ಸಾಲ, ವಾಹನ ಖರೀದಿ ಹಾಗೂ ವಿವಿಧ ಸಹಕಾರ ಸಂಸ್ಥೆಗಳಿಗೆ, ವ್ಯಕ್ತಿಗಳಿಗೆ ನಗದು ಪತ್ತಿನ ಸಾಲ ನೀಡುತ್ತಿದೆ. ಪ್ರಸ್ತುತ ವರ್ಷ 241 ಕೋಟಿ ರೂ. ಕೃಷಿಯೇತರ ಸಾಲ ವಿತರಿಸಿದ್ದು, 500 ಕೋಟಿ ರೂ. ಗುರಿ ಹೊಂದಲಾಗಿದೆ. ಈವರೆಗೆ 920 ಕೋಟಿ ರೂ. ಸಂಗ್ರಹವಾಗಿದೆ. 2023-24ನೇ ಸಾಲಿಗೆ ಇದನ್ನು 1160 ಕೋಟಿ ರೂ.ಗೆ ಏರಿಸುವ ಗುರಿ ಇದೆ ಎಂದರು.
ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಸೇವೆ ನೀಡುತ್ತಿರುವ ಬ್ಯಾಂಕ್ 48 ಶಾಖೆಗಳನ್ನು ಹೊಂದಿದ್ದು, ಹೊಸದಾಗಿ 17 ಶಾಖೆಗಳನ್ನು ಆರಂಭಿಸಲಾಗುತ್ತಿದೆ. ಎಲ್ಲ ಶಾಖೆಗಳಿಗೂ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಡಿ ಗಣಕೀಕರಣಗೊಳಿಸಿ ಇದರಿಂದ ಪಾರದರ್ಶಕ ವ್ಯವಹಾರಕ್ಕೆ ಅನುಕೂಲ ಕಲ್ಪಿಸಲಾಗುವುದು. ರೂಪೆ, ಎಟಿಎಂ ಕಾರ್ಡ್ ಹೊಂದಿದ್ದು, ಇನ್ನು ಕೆಲ ದಿನಗಳಲ್ಲೇ ಫೋನ್ ಪೇ, ಗೂಗಲ್ ಪೇ ಸೌಲಭ್ಯ ಸಹ ದೊರೆಯಲಿದೆ. ಬೆಳೆವಿಮೆ, ಯಶಸ್ವಿನಿ, ಆರೋಗ್ಯ ವಿಮೆ, ಸುರಕ್ಷಾ ವಿಮೆ, ಪಿಎಂ ಜೀವನ ಜ್ಯೋತಿ ವಿಮೆ, ಅಟಲ್ ಪಿಂಚಣಿ ಸೌಲಭ್ಯಗಳೂ ಇವೆ ಎಂದರು.
550 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಆರ್ಥಿಕವಾಗಿ ಸಬಲತೆ ಸಾಧಿಸುವ ನಿಟ್ಟಿನಲ್ಲಿ ಹೊಸ ಆಡಳಿತ ಮಂಡಳಿ ಕಾರ್ಯ ಮಾಡಲಿದೆ. ಸರ್ಕಾರದ ಹಣಕಾಸು ವ್ಯವಹಾರ ಬ್ಯಾಂಕ್ ಮೂಲಕ ನಡೆಯಬೇಕು ಎಂದು ಇತ್ತೀಚೆಗೆ ನಡೆದ ಸಹಕಾರ ಸಪ್ತಾಹ ಮೂಲಕ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಇದರಿಂದ ಬ್ಯಾಂಕ್ ಮತ್ತಷ್ಟು ಆರ್ಥಿಕವಾಗಿ ಸಲಬತೆ ಸಾಧಿಸಲಿದೆ ಎಂದರು.
ಉಪಾಧ್ಯಕ್ಷ ನಿಂಗನಗೌಡ ಮರಿಗೌಡ್ರ, ನಿರ್ದೇಶಕರಾದ ಜಿ.ಪಿ.ಪಾಟೀಲ, ಮಲ್ಲಿಕಾರ್ಜುನ ಹೊರಕೇರಿ, ಉಮೇಶ ಹೆಬಸೂರ, ಮಂಜುನಾಥ ಮುರಳ್ಳಿ, ಸಂಗಮೇಶ ಕಂಬಾಳಿಮಠ, ಸಿದ್ದಪ್ಪ ಸಪೂರಿ, ಸಿಇಒ ಕೆ.ಮುನಿಯಪ್ಪ, ಪ್ರಧಾನ ವ್ಯವಸ್ಥಾಪಕ ಎಸ್.ವಿ. ಹೂಗಾರ, ಅಧಿಕಾರಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net