

ಹಾಸನ: ಸತತ ನಾಲ್ಕು ಬಾರಿ ವಿಧಾನಸಭೆ ಪ್ರವೇಶಿಸಿರುವ ಕೆ.ಎಂ. ಶಿವಲಿಂಗೇಗೌಡ ಅವರಿಗೆ ಈ ಬಾರಿಯ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳು ದಟ್ಟವಾಗಿವೆ. ಕಳೆದ ಮೂರು ಅವಧಿಯಲ್ಲಿ ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾಗಿರುವ ಶಿವಲಿಂಗೇಗೌಡರು ಈ ಬಾರಿ ತೆನೆ ಕೆಳಗಿಳಿಸಿ ಕಾಂಗ್ರೆಸ್ ಸ್ಪರ್ಧಿಸಿ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಅಷ್ಟೇ ಅಲ್ಲದೇ, ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಏಕೈಕ ಶಾಸಕರಾಗಿದ್ದಾರೆ.
ಅರಸೀಕೆರೆ ವಿಧಾನಸಭಾ ಕ್ಷೇತ್ರದ ಇತಿಹಾಸ ನೋಡುವುದಾದರೆ ಕಳೆದ 72 ವರ್ಷಗಳಲ್ಲಿ ಈ ಕ್ಷೇತ್ರ 16 ಚುನಾವಣೆಗಳನ್ನು ಕಂಡಿದೆ. ಆದರೆ, ಈವರೆಗೂ ಈ ಕ್ಷೇತ್ರದಿಂದ ಆಯ್ಕೆಯಾದ ಯಾವೊಬ್ಬ ಶಾಸಕರಿಗೂ ಮಂತ್ರಿಯಾಗುವ ಯೋಗ ಈವರೆಗೂ ಲಭಿಸಿಲ್ಲ. ಶಾಸಕರಾಗಿ ಆಯ್ಕೆಯಾದಾಗ ಆ ಪಕ್ಷ ಅಧಿಕಾರದಲ್ಲಿ ಇರುವುದಿಲ್ಲ. ಪಕ್ಷ ಅಧಿಕಾರಕ್ಕೆ ಬಂದಾಗ ಆ ಪಕ್ಷದ ಅಭ್ಯರ್ಥಿ ಶಾಸಕರಾಗಿ ಆಯ್ಕೆಯಾಗದೆ ಇದ್ದದ್ದೇ ಈ ಕ್ಷೇತ್ರದಿಂದ ಯಾರೊಬ್ಬರೂ ಈವರೆಗೂ ಮಂತ್ರಿಯಾಗಲು ಸಾಧ್ಯವಾಗಿಲ್ಲ. 2018ರ ಚುನಾವಣೆಯಲ್ಲಿ ಶಿವಲಿಂಗೇಗೌಡರು ಜೆಡಿಎಸ್‌ನಿಂದ ಗೆದ್ದಿದ್ದರು. ಈ ವೇಳೆ ಅದೇ ಪಕ್ಷ ಕಾಂಗ್ರೆಸ್ ನೆರವಿನೊಂದಿಗೆ ಸರ್ಕಾರ ರಚಿಸಿತ್ತು. ಆದರೂ ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಈಗ ಕಾಂಗ್ರೆಸ್‌ನಿಂದ ಶಾಸಕರಾಗಿದ್ದು, ಅದೇ ಪಕ್ಷ ಸ್ವತಂತ್ರವಾಗಿ ಸರ್ಕಾರ ರಚಿಸಲಿದೆ. ರಾಜ್ಯದಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗಳಿಸಿದ್ದರೂ ಹಾಸನ ಜಿಲ್ಲೆಯಲ್ಲಿ ಕೇವಲ ಒಂದು ಸ್ಥಾನ ಮಾತ್ರ ಗಳಿಸಿದೆ. ಸಂಪುಟ ರಚನೆಯಲ್ಲಿ ಜಿಲ್ಲಾವಾರು ಪ್ರಾತಿನಿಧ್ಯ, ಹಿರಿತನ, ಹಾಗೂ ಸಮುದಾಯವಾರು... ಹೀಗೆ ಯಾವುದೇ ಲೆಕ್ಕಾಚಾರದಲ್ಲಿ ಆದ್ಯತೆ ನೀಡಿದರೂ ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡಲೇಬೇಕು. ಆದರೆ, ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಘಟಾನುಘಟಿಗಳ ದಂಡೇ ಇರುವುದರಿಂದ ಮಂತ್ರಿಗಿರಿ ಒಲಿಯುವುದು ಸಹ ಅಷ್ಟು ಸುಲಭವೂ ಇಲ್ಲ.
ಸಿದ್ದರಾಮಯ್ಯ ಆಪ್ತ ಕೆಎಂಶಿ
ಶಿವಲಿಂಗೇಗೌಡ ಅವರು ಇಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸಿದ್ದರಾಮಯ್ಯ ಅವರಿಗೆ ಪರಮಾಪ್ತರಾಗಿದ್ದಾರೆ. ಅವರ ನೇತೃತ್ವದಲ್ಲಿಯೇ ಕೆಎಂಶಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದು. ಅಷ್ಟೇ ಅಲ್ಲದೇ ಡಿ.ಕೆ. ಶಿವಕುಮಾರ್ ಅವರೊಂದಿಗೆ ಆತ್ಮೀಯತೆ ಹೊಂದಿದ್ದಾರೆ. ಹೀಗಾಗಿ ಶಿವಲಿಂಗೇಗೌಡರ ಹೆಸರು ಸಂಭಾವ್ಯ ಸಚಿವರ ಪಟ್ಟಿಯಲ್ಲಿದೆ ಎಂದು ಹೇಳಲಾಗುತ್ತಿದೆ.
ಪಕ್ಷ ಸಂಘಟನೆ ದೃಷ್ಟಿಯಿಂದ ಸಚಿವ ಸ್ಥಾನ?
ಕಳೆದ 10 ವರ್ಷಗಳಿಂದ ಜಿಲ್ಲೆಯಲ್ಲಿ ಯಾವುದೇ ಅಧಿಕಾರವಿಲ್ಲದೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಹೈರಾಣಾಗಿದ್ದಾರೆ. ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಿಂದ ಜಿಲ್ಲೆಯಲ್ಲಿ ಪಕ್ಷವನ್ನು ಮತ್ತಷ್ಟು ಸದೃಢವಾಗಿಸಬೇಕೆಂದರೆ ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡುವ ಅವಶ್ಯಕತೆ ಇದೆ. ಇಲ್ಲವಾದರೆ ಸ್ಥಳೀಯ ಸಂಸ್ಥೆಗಳು ಮತ್ತು ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ತೊಂದರೆ ಉಂಟಾಗಲಿದೆ ಎಂಬ ಅಭಿಪ್ರಾಯಗಳು ಕೂಡ ಕೇಳಿಬರುತ್ತಿವೆ. ಇದರ ಜತೆಗೆ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದಲೂ ಕೂಡ ಮಂತ್ರಿಗಿರಿ ನೀಡಬೇಕೆಂಬ ಒತ್ತಡಗಳು ಕೂಡ ಹೆಚ್ಚಾಗತೊಡಗಿವೆ.
ಚುಂಚನಗಿರಿ ಸ್ವಾಮೀಜಿಯಿಂದ ಲಾಬಿ?
ಶಿವಲಿಂಗೇಗೌಡ ಅವರು ಶುಕ್ರವಾರ ಕುಟುಂಬಸಮೇತ ಆದಿಚುಂಚನಗಿರಿ ಮಠಕ್ಕೆ ತೆರಳಿ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಇದೇ ವೇಳೆ ಮಂತ್ರಿಗಿರಿಗಾಗಿ ಸ್ವಾಮೀಜಿ ಕಡೆಯಿಂದಲೂ ಒತ್ತಡ ಹಾಕಿಸಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.
ಮೇಜು ಕುಟ್ಟಿ ಮಾತನಾಡುವ ಸಾಮರ್ಥ್ಯ
ಕೆ.ಎಂ. ಶಿವಲಿಂಗೇಗೌಡ ಅವರ ಮಾತು ಒರಟು ಎನಿಸಿದರೂ ಸದನದಲ್ಲಿ ವಿಷಯಾಧಾರಿತ ಚರ್ಚೆಯಲ್ಲಿ ರಾಜ್ಯದ ಗಮನ ಸೆಳೆದವರು. ಇಂದಿಗೂ ಗ್ರಾಮೀಣ ಶೈಲಿಯಲ್ಲಿಯೇ ನಿರರ್ಗಳವಾಗಿ ಮಾತನಾಡುವ ಇವರು ಯಾವುದೇ ವಿಷಯವನ್ನು ಸದನದ ಹಾಗೂ ರಾಜ್ಯದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಸರ್ಕಾರವಿದ್ದರೂ ಎಲ್ಲರ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಆತ್ಮೀಯ ಒಡನಾಟ ಹೊಂದುವ ಮೂಲಕ ಅನುದಾನ ತರುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ತಮ್ಮ ಅವಧಿಯಲ್ಲಿ ಕೆರೆಗಳ ಅಭಿವೃದ್ಧಿ, ರಸ್ತೆ, ಸಮುದಾಯ ಭವನ, ಚರಂಡಿ ವ್ಯವಸ್ಥೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿರುವ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಈ ಹಿಂದೆ ಅರಸೀಕೆರೆ ತಾಲ್ಲೂಕು ಫ್ಲೋರೈಡ್‌ಯುಕ್ತ ಎಂದು ಘೋಷಿಸುವ ಮೂಲಕ ಕುಡಿಯಲು ಯೋಗ್ಯವಲ್ಲದ ನೀರು ಎಂದು ದೃಢೀಕರಿಸಲಾಗಿತ್ತು. ಈ ಸಂದರ್ಭದಲ್ಲಿ ಆಗಿನ ಸರ್ಕಾರ ಮತ್ತು ಸಚಿವರ ಮೇಲೆ ಒತ್ತಡ ತಂದು ಈಗ ತಾಲ್ಲೂಕಿನ ಬಹುತೇಕ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಮೂಲಕ ಆಧುನಿಕ ಭಗೀರಥ ಎಂದು ಕರೆಸಿಕೊಂಡಿದ್ದಾರೆ.
ಶಿವಲಿಂಗೇಗೌಡರು ಸಾಗಿ ಬಂದ ಜೀವನಪಥ
ಸಾಮಾನ್ಯ ಕೃಷಿ ಕುಟುಂಬದಲ್ಲಿ 1958ರ ಫೆಬ್ರವರಿಯಲ್ಲಿ ಜನಿಸಿದ ಶಿವಲಿಂಗೇಗೌಡ ಎಂಟನೇ ತರಗತಿ ಓದುವಾಗಲೇ ತಂದೆಯನ್ನು ಕಳೆದುಕೊಂಡರು. ಒಟ್ಟು 8 ಮಂದಿ ಮಕ್ಕಳಲ್ಲಿ ಇವರು ನಾಲ್ಕನೆಯವರು. ತಾಯಿ ಕಷ್ಟಪಟ್ಟು ಇವರನ್ನೆಲ್ಲಾ ಸಾಕಿ ಸಲವಿದರು. ಎಂಟು ಮಂದಿ ಮಕ್ಕಳಲ್ಲಿ ಕಾಲೇಜು ಮೆಟ್ಟಿಲು ಹತ್ತಿದವರು ಇವರೊಬ್ಬರೆ. ಹಾಸನದಲ್ಲಿ ಪದವಿ ಪಡೆದ ಶಿವಲಿಂಗೇಗೌಡ ಅವರು ಬಳಿಕ ಗುತ್ತಿಗೆದಾರರಾಗಿ ಜೀವನ ಆರಂಭಿಸಿದರು. ಆ ನಂತರ ಜಿಲ್ಲಾ ಪಂಚಾಯಿತಿ ಸದಸ್ಯರಾಗುವ ಮೂಲಕ ರಾಜಕೀಯ ರಂಗ ಪ್ರವೇಶಿಸಿದರು. 2004ರಲ್ಲಿ ಗಂಡಸಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಬಿ. ಶಿವರಾಂ ವಿರುದ್ಧ ಕೇವಲ 16 ಮತಗಳ ಅಂತರದಿಂದ ಪರಾಭವಗೊಳ್ಳುತ್ತಾರೆ. 2008ರಲ್ಲಿ ಅರಸೀಕೆರೆ ಕ್ಷೇತ್ರದಿಂದ ಸ್ಪರ್ಧಿಸಿ ಈವರೆಗೂ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ.