

ಬೆಳಗಾವಿ: ಕರಡಿಗಳು ದಾಳಿ ಮಾಡಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ನಗರದ ವಿಜಯಾ ಆಸ್ಪತ್ರೆಯ ಆರ್ಥೋಪೆಡಿಕ್ ಶಸ್ತ್ರ ಚಿಕಿತ್ಸಕರು ಯಶಸ್ವಿ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ.ರವಿ ತಿಳಿಸಿದರು.
ಆಸ್ಪತ್ರೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಚಂದಗಡದ ವಿಠಲ ತಾನಾಜಿ ಶೈಲಾಕೆ (72) ಎಂಬ ವೃದ್ಧ ಕರಡಿ ದಾಳಿಗೆ ಒಳಗಾಗಿ ತೀವ್ರವಾಗಿ ಗಾಯಗೊಂಡಿದ್ದರು. ಚಂದಗಡದಿಂದ ರಾಮನಗರ ಸಮೀಪದ ಜಗಲಪೇಟೆ ಫಾರೆಸ್ಟ್ ರೇಂಜ್ ಮೂಲಕ ತಂಬೋಲಿ ಎಂಬ ಊರಿಗೆ ಸೊಸೆ ಮನೆಗೆ ವಿಠ್ಠಲ ಅವರು ಮೊಮ್ಮಗನನ್ನು ಕರೆದುಕೊಂಡು ಬರುವುದಕ್ಕೆ ಹೋಗುತ್ತಿದ್ದಾಗ ಕರಡಿಗಳು ದಾಳಿ ನಡೆಸಿವೆ. ವಿಠ್ಠಲ ಅವರ ಎರಡೂ ಕಣ್ಣುಗಳಿಗೆ ಭಯಾನಕವಾಗಿ ಗಾಯಗೊಳಿಸಿವೆ. ಕಿವಿ, ಕಪಾಳ ಹಾಗೂ ತಲೆ ಪದರು ಹರಿದಿವೆ. ಸಾವು-ಬದುಕಿನ ಮಧ್ಯೆಯೇ ತಪ್ಪಿಸಿಕೊಂಡು ಬಂದ ವಿಠ್ಠಲ ಅವರು, ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣಿಗೆ ಬಿದ್ದಿದ್ದರು. ಆರ್‌ಎಫ್‌ಒ ಚಂದ್ರಕಾಂತ ಹಿಪ್ಪರಗಿ ಅವರು ಕೂಡಲೇ ಬೆಳಗಾವಿ ವಿಜಯಾ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಗಂಭೀರ ಗಾಯಕ್ಕೆ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿದ್ದು, ರೋಗಿಯು ಗುಣಮುಖರಾಗುತ್ತಿದ್ದಾರೆ. ಮಿದುಳಿಗೆ ಏನಾದರೂ ಹಾನಿಯಾಗಿದೆಯೇ ಎಂಬುದನ್ನು ತ್ರೀಡಿ ತಂತ್ರಜ್ಞಾನದಿಂದ ವೈದ್ಯರು ಪರಿಸೀಲಿದ್ದು, ಕೂದಲೆಳೆ ಅಂತರದಲ್ಲಿ ಹಾನಿ ತಪ್ಪಿದೆ. ಮಿದುಳಿನ ಮೇಲೆ ಸ್ವಲ್ಪ ಪರಚಿದಂತೆ ಕಾಣುತ್ತದೆ ಎಂದು ವೈದ್ಯರು ಹೇಳಿದ್ದು, ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಕ ಡಾ.ಕೌಸ್ತುಭ ದೇಸಾಯಿ, ಡಾ.ಶ್ರೀಧರ ಖಟವಾಟೆ ಯಶಸ್ವಿ ಚಿಕಿತ್ಸೆ ನೀಡಿದ್ದಾರೆ ಎಂದು ರವಿ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.