

ವಿಜಯವಾಣಿ ಸುದ್ದಿಜಾಲ ಶಿರಸಿ:
ಸಿವಿಲ್ ಡಿಪ್ಲೊಮಾ ಇಂಜಿನಿಯರಿಂಗ್ ವಿಭಾಗದ ಪರೀಕ್ಷೆಯಲ್ಲಿ ಇಲ್ಲಿನ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜ್ ವಿದ್ಯಾರ್ಥಿಯಾಗಿದ್ದ 71ರ ಹರೆಯದ ನಾರಾಯಣ ಭಟ್ಟ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ನ.2ರಂದು ಬೆಂಗಳೂರಿನಲ್ಲಿ ನಡೆಯಲಿರುವ ಡಿಪ್ಲೊಮಾ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ತಾಂತ್ರಿಕ ಶಿಕ್ಷಣ ಸಚಿವರು ಇವರನ್ನು ಗೌರವಿಸಲಿದ್ದಾರೆ.
2019-20 ರಿಂದ 2021-22ನೇ ಸಾಲಿನ ಡಿಪ್ಲೊಮಾ ಪರೀಕ್ಷೆಯ ಫಲಿತಾಂಶವನ್ನು ರಾಜ್ಯ ತಾಂತ್ರಿಕ ಪರೀಕ್ಷಾ ಮಂಡಳಿ ಪ್ರಕಟಿಸಿದ್ದು ಶೇ.94.88ರಷ್ಟು ಅಂಕ ಗಳಿಕೆಯೊಂದಿಗೆ ಸಿವಿಲ್ ಡಿಪ್ಲೊಮಾ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ಎಂಬ ಹಿರಿಮೆಗೆ ಇಳಿ ವಯಸ್ಸಿನ ವ್ಯಕ್ತಿ ಪಾತ್ರರಾಗಿದ್ದಾರೆ. ತಾಲೂಕಿನ ಸುಗಾವಿ ಮೂಲದ ನಾರಾಯಣ ಅವರು ಸಧ್ಯ ಶಿರಸಿಯಲ್ಲಿ ನೆಲೆಸಿದ್ದಾರೆ.
1973ರಲ್ಲೇ ಮೆಕ್ಯಾನಿಕಲ್ ಡಿಪ್ಲೊಮಾ ಓದಿ, ಕಾರವಾರ, ಗುಜರಾತ್ ಸೇರಿದಂತೆ ವಿವಿಧೆಡೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ್ದರು.
2013ರಲ್ಲಿ ನಿವೃತ್ತಿ ಪಡೆದು ಶಿರಸಿಗೆ ಮರಳಿದ್ದ ಅವರು ಪುನಃ ಡಿಪ್ಲೊಮಾ ಕಲಿಕೆಗೆ ಆಸಕ್ತಿ ತೋರಿದ್ದರು. ಅವರಿಗೆ ಪ್ರವೇಶಾತಿ ನೀಡಲು ತಾಂತ್ರಿಕ ಅಡಚಣೆ ಎದುರಾಗಿತ್ತು. ಅಂತಿಮವಾಗಿ 2019ರಲ್ಲಿ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ಡಿಪ್ಲೊಮಾ ವಿಭಾಗಕ್ಕೆ ಪ್ರವೇಶ ದೊರೆತಿತ್ತು. ನಿತ್ಯ ಕಾಲೇಜಿನ ಸಮವಸ್ತ್ರ ಧರಿಸಿ ಸರಿಯಾದ ಸಮಯಕ್ಕೆ ಕಾಲೇಜಿನ ತರಗತಿಗೆ ಹಾಜರಾಗಿ, ಟೀನೇಜ್ ವಿದ್ಯಾರ್ಥಿಗಳ ಜೊತೆಗೆ ಹೊಂದಿಕೊಂಡು, ಅವರಂತೆಯೇ ಕ್ಲಾಸಿನಲ್ಲಿ ಕುಳಿತು ಪಾಠ ಕೇಳುತ್ತಿದ್ದರು.
ಆದರ್ಶ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದರು. ನಿತ್ಯದ ಹೋಮ್ ವರ್ಕ್ ಅನ್ನು ಕೂಡ ಚಾಚೂ ತಪ್ಪದೇ ಮಾಡಿಕೊಂಡು ಬರುವ ಮೂಲಕ ಕಾಲೇಜಿನ ಆದರ್ಶ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದರು. ಮೂರು ವರ್ಷಗಳ ಸಿವಿಲ್ ಡಿಪ್ಲೊಮಾ ಕೋರ್ಸ್ ಗೆ ನಿತ್ಯ ತರಗತಿಗೆ ಹಾಜರಾಗಿ ಪ್ರಥಮ ವರ್ಷದಲ್ಲಿ ಶೇ 91 ಅಂಕ ಗಳಿಸಿ ಪ್ರಥಮ ಸ್ಥಾನ ಗಳಿಸಿದ್ದ ಭಟ್ಟರು, ಅಂತಿಮವಾಗಿ ಶೇ. 94.88 ಫಲಿತಾಂಶ ದಾಖಲಿಸಿ ಇಂದಿನ ಯುವ ವಿದ್ಯಾರ್ಥಿಗಳು ನಾಚುವಂಥ ಸಾಧನೆ ಮಾಡಿದ್ದಾರೆ.
ಭಟ್ಟರ ಬಗ್ಗೆ ಅವರ ಸಿವಿಲ್ ವಿಭಾಗದ ಉಪನ್ಯಾಸಕ ಸಂಜಯ ಕೂರ್ಸೆ ಮಾತನಾಡಿ, ವಿಧೇಯ, ಆದರ್ಶ ವಿದ್ಯಾರ್ಥಿ ಅಂತೆಂದರೆ ನಾರಾಯಣ ಭಟ್ಟರು ಎನ್ನಬಹುದು. ಒಂದೇ ಒಂದು ದಿನ ತರಗತಿಗೆ ಗೈರಾಗಿಲ್ಲ. ಸಮವಸ್ತ್ರ ಇಲ್ಲದೆ ಬಂದಿದ್ದು ಇಲ್ಲ. ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲೂ ಇತರ ಯುವಕರನ್ನೂ ನಾಚಿಸುವಂತೆ ಅವರು ಭಾಗವಹಿಸುತ್ತಿದ್ದರು ಎಂದು ಹೆಮ್ಮೆ ವ್ಯಕ್ತಪಡಿಸಿದರು.