

ಬೀದರ್: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ 71 ಗೃಹಬಳಕೆ ಸಿಲಿಂಡರ್ ಗಳನ್ನು ಜಪ್ತಿ ಮಾಡಿದ್ದಾರೆ.
ಮೈಲೂರಿನ ಸಿಎಂಸಿ ಕಾಲನಿಯಲ್ಲಿ 6, ಭಾಲ್ಕಿ ತಾಲೂಕಿನ ಎರಡು ಕಡೆ 65 ಸಿಲಿಂಡರ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಆಹಾರ ನಿರೀಕ್ಷಕ ನಾಗರಾಜ, ಗಾಂಧಿಗಂಜ್ ಠಾಣೆ ಪಿಎಸ್ಐ ಸೈಯದ್ ಪಟೇಲ್ ನೇತೃತ್ವದಲ್ಲಿ ಸಿಎಂಸಿ ಕಾಲನಿ ಮನೆಯೊಂದರ ಮೇಲೆ ದಾಳಿ ನಡೆಸಿ 6 ಸಿಲಿಂಡರ್ ಜಪ್ತಿ ಮಾಡಿದ್ದಾರೆ.
ಆಹಾರ ನಿರೀಕ್ಷಕ ರಾಜೇಂದ್ರಕುಮಾರ, ಪಿಎಸ್ಐ ರಮೇಶ ಟೋಕರೆ ನೇತೃತ್ವದಲ್ಲಿ ಭಾಲ್ಕಿ ಪಟ್ಟಣದ ಪಾಪವ್ವಾ ಕ್ರಾಸ್ ಹತ್ತಿರದ ನ್ಯೂ ಜ್ಯೋತಿ ಗ್ಯಾಸ್ ಸರ್ವಿಸಿಂಗ್ ಸೆಂಟರ್ ನಲ್ಲಿ ಅನಧಿಕೃತವಾಗಿ ಹೆಚ್ಚಿನ ಬೆಲೆಗೆ ಮಾರುತ್ತಿದ್ದ 27 ಗೃಹಬಳಕೆ, 4 ವಾಣಿಜ್ಯ ಬಳಕೆ, ಒಂದು ತೂಕದ ಯಂತ್ರ, ಗ್ಯಾಸ್ ತುಂಬುವ ಮೋಟಾರ್ ಜಪ್ತಿ ಮಾಡಲಾಗಿದೆ. ಭಾಲ್ಕಿ ತಾಲೂಕಿನ ಉಚ್ಚಾ ಗ್ರಾಮದಲ್ಲಿ ಆಹಾರ ಶಿರಸ್ತೇದಾರ ವೆಂಕಟರಾವ್ ಬಿರಾದಾರ್, ಖಟಕಚಿಂಚೋಳಿ ಪಿಎಸ್ಐ ಶಕಲೇಶ್ ಪಟೇಲ್ ನೇತೃತ್ವದಲ್ಲಿ ದಾಳಿ ನಡೆಸಿ 34 ಸಿಲಿಂಡರ್ ವಶಪಡಿಸಿಕೊಂಡು ಕೇಸ್ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ ಯಾವ ಕಡೆಯೂ ಗೃಹಬಳಕೆ ಸಿಲಿಂಡರ್ ಗಳನ್ನು ಅಕ್ರಮವಾಗಿ ಸಂಗ್ರಹಿಸಿ ಇಡುವುದಾಗಲಿ, ವಾಣಿಜ್ಯ ಉದ್ದೇಶಕ್ಕೆ ಮಾರುವುದು ಕಂಡಲ್ಲಿ ಅಥವಾ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಗೃಹಬಳಕೆ ಸಿಲಿಂಡರ್ ಉಪಯೋಗಿಸಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಗ್ಯಾಸ್ ಏಜೆನ್ಸಿಯವರು ಇಂಥ ಪ್ರಕರಣಗಳಲ್ಲಿ ಶಾಮೀಲಾದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಆಹಾರ ಇಲಾಖೆ ಉಪ ನಿರ್ದೇಶಕಿ ಸುರೇಖಾ ಎಚ್ಚರಿಕೆ ನೀಡಿದ್ದಾರೆ.