

ಹಾವೇರಿ: ಆನ್ಲೈನ್ನಲ್ಲಿ ಹೆಚ್ಚಿನ ಲಾಭಾಂಶ ನೀಡುವ ನೆಪದಲ್ಲಿ ವೈದ್ಯರೊಬ್ಬರಿಂದ 71.50 ಲಕ್ಷ ರೂ. ವಸೂಲಿ ಮಾಡಿದ್ದ ಸೈಬರ್ ಖದೀಮನನ್ನು ಇಲ್ಲಿಯ ಸೈಬರ್ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ರಾಜಸ್ತಾನದ ಗಂಗಾನಗರದ ನಿವಾಸಿ ಸೋನು ದಾಮೋದರ ಠಾಕೂರ (34) ಬಂಧಿತ ಆರೋಪಿ. ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳಿದ್ದು ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತನಿಂದ ಒಂದು ಕಾರು, 50 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ವೈದ್ಯನಿಂದ ಖಾತೆಗೆ ಹಾಕಿಸಿಕೊಂಡ ಹಣದಲ್ಲಿ 10 ಲಕ್ಷ ರೂ. ಪ್ರೀಜ್ ಮಾಡಿಸಲಾಗಿದೆ.
ಸೆ. 9ರಂದು ನಗರದ ವೈದ್ಯ ಡಾ. ರಾಜೇಂದ್ರ ಲೋಡಾಯಿ ಎಂಬುವವರಿಗೆ ಕರೆ ಮಾಡಿ ಫಾಸ್ಟ್ ಮಾರ್ಕ್ ಪ್ಲಾಟ್ ಫಾಮ್ರ್ ಕಂಪನಿ ಮೂಲಕ ಐಪಿಒ ಪರ್ಚೆಸ್ ಮಾಡಿದರೆ ಶೇ. 20ರಷ್ಟು ಲಾಭ ಕೊಡುವುದಾಗಿ 71.50 ಲಕ್ಷ ರೂ. ಹಾಕಿಸಿಕೊಂಡು ಮೋಸ ಮಾಡಿದ್ದರು.
ಈ ಕುರಿತು ವೈದ್ಯರು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಎಸ್ಪಿ ಅಂಶುಕುಮಾರ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆಯ ಸಿಪಿಐ ಪ್ರಗ್ಯಾ ಆನಂದ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ಕುರಿತು ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.