ಮನೆ ಮತದಾನದಲ್ಲಿ ಶೇ.71.75 ರಷ್ಟು ಹಕ್ಕುಚಲಾವಣೆ

13KDR3
ಕಡೂರಿನ ಸಿಂಗಟಗೆರೆ ಗ್ರಾಮದ 208 ಮತಗಟ್ಟೆ ವ್ಯಾಪ್ತಿಯಲ್ಲಿ ವೃದ್ದೆಯೊಬ್ಬರು ಲೋಕಸಭೆ ಚುನಾವಣೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು.
Published on

ಕಡೂರು: ಚುನಾವಣೆ ಆಯೋಗದ ನಿರ್ದೇಶನದಂತೆ 85 ವರ್ಷ ಮೇಲ್ಪಟ್ಟ ವಯೋಮಿತಿ ಮೀರಿದವರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಿಕೊಟ್ಟ ಹಿನ್ನಲೆಯಲ್ಲಿ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ನೊಂದಾಯಿಸಿಕೊಂಡಿದ್ದ 485 ಮತದಾರರ ಪೈಕಿ 355 ಮತದಾರರು ಲೋಕಸಭೆ ಚುನಾವಣೆಯಲ್ಲಿ ಶನಿವಾರ ತಮ್ಮ ಹಕ್ಕು ಚಲಾಯಿಸಿದರು.
ಕಡೂರು ಕ್ಷೇತ್ರದಲ್ಲಿ ರಚಿಸಿಕೊಂಡಿರುವ 27 ಮಾರ್ಗದಲ್ಲಿ ಶನಿವಾರ 20 ಮಾರ್ಗದ ಕಡೆಗಳಲ್ಲಿ ಮತಗಟ್ಟೆ ಅಧಿಕಾರಿ, ಸಿಬ್ಬಂದಿ, ರಕ್ಷಣಾ ಸಿಬ್ಬಂದಿ ಒಳಗೊಂಡ ತಂಡ ತಾಲೂಕು ಕಚೇರಿಯಿಂದ ಮತದಾನಕ್ಕೆ ನೊಂದಾಯಿಸಿಕೊಂಡಿದ್ದ ವಿವಿಧ ಗ್ರಾಮಗಳ ಮನೆಗಳಿಗೆ ಭೇಟಿ ನೀಡಿ ಆಯೋಗದ ನಿರ್ದೇಶನದಂತೆ ಮತದಾನದ ಪ್ರಕ್ರಿಯೆ ನಡೆಸಿದರು.
ಮನೆಯಲ್ಲಿಯೇ ಮತದಾನ ಮಾಡಲು ನೋಂದಾಯಿಸಿಕೊಂಡಿದ್ದ ವಿಶೇಷ ಚೇತನರು ಹಾಗೂ 85 ವರ್ಷ ದಾಟಿದ ಹಿರಿಯ ವೃದ್ಧರಿಗೆ ಮನೆಯಲ್ಲಿ ಮುಕ್ತವಾಗಿ ಮತದಾನ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಶನಿವಾರ ನಡೆದ ಮತದಾನದಲ್ಲಿ ಶೇ.71.75 ಮತದಾನವಾಗಿದೆ. ಭಾನುವಾರ ಬಾಕಿ ಉಳಿದ 106 ಮತದಾರರಿಗೆ ಮತದಾನ ಮಾಡಲು 6 ಕಡೆಗಳ ಮಾರ್ಗದಲ್ಲಿ ಮತಗಟ್ಟೆ ಅಧಿಕಾರಿಗಳ ತಂಡ ಭೇಟಿ ನೀಡಿ ಮತದಾನಕ್ಕೆ ಅವಕಾಶ ಕಲ್ಪಿಸಲಿದ್ದಾರೆ. ಒಟ್ಟಾರೆ ಮತದಾನದ ಪ್ರಕ್ರಿಯೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮನೆಯಲ್ಲಿಯೇ ಮತದಾನಕ್ಕೆ ಅವಕಾಶ ನೀಡಿದ ಚುನಾವಣಾ ಆಯೋಗದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ್ ಎಂ.ಪಿ.ಕವಿರಾಜ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net