

ಅರಸೀಕೆರೆ :ವಿವಿಧ ಕಾರಣಗಳಿಂದ ತೆರವಾಗಿದ್ದ ನಗರಸಭೆಯ 8 ವಾರ್ಡ್‌ಗಳ ಉಪ ಚುನಾವಣೆಗೆ ಶನಿವಾರ ಶಾಂತಿಯುತ ಮತದಾನ ನಡೆದಿದ್ದು, ಶೇ.71.58 ಮತದಾನವಾಗಿದೆ.
ಕಂತೇನಹಳ್ಳಿ, ಸರಸ್ವತಿಪುರಂ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಕಾಳನಕೊಪ್ಪಲು, ರೋಟರಿ ಶಾಲೆ, ಶ್ರೀನಿವಾಸನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ವಿವಿಧ ಮತಗಟ್ಟೆಗಳಿಗೆ ಉತ್ಸಾಹದಿಂದ ಆಗಮಿಸಿದ ಮತದಾರರು, ತಮ್ಮ ಹಕ್ಕು ಚಲಾಯಿಸಿದರು. ಬೆಳಗ್ಗೆ ನೀರಸವಾಗಿದ್ದ ಮತದಾನ ಹನ್ನೊಂದು ಗಂಟೆ ವೇಳೆಗೆ ಬಿರುಸು ಪಡೆದುಕೊಂಡಿತ್ತು. 25ನೇ ವಾರ್ಡ್‌ನ ಶತಾಯುಶಿಷಿ ಸುಖನ್ ರಾಜ್ ಬಾಲಕಿಯರ ಪ.ಪೂ ಕಾಲೇಜು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದು ವಿಶೇಷವಾಗಿತ್ತು.
ಕಳೆದ ಬಾರಿ ಜೆಡಿಎಸ್‌ನಿಂದ ವಿಧಾನಸಭಾ ಚುನವಣೆಗೆ ಸ್ಪರ್ಧೆ ಮಾಡಿದ್ದ ಎನ್.ಆರ್.ಸಂತೋಷ್ ಕುಟುಂಬ ಸಮೇತ ವಿವೇಕಾನಂದ ಬಿಇಡಿ ಕಾಲೇಜು ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಮಾತಿನ ಚಕಮಕಿ:ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮತಗಟ್ಟೆಯಲ್ಲಿ ನಗರಸಭೆ ಸಿಬ್ಬಂದಿ ಉಮೇಶ್ ಮತ ಹಾಕಲು ಬಂದವರಿಗೆ ತಪ್ಪು ಮಾಹಿತಿ ನೀಡಿ ಕಳುಹಿಸುತ್ತಿದ್ದಾರೆ ಎಂದು ಅಭ್ಯರ್ಥಿ ಬಿ.ಎನ್.ವಿದ್ಯಾಧರ್ ಹಾಗೂ ಉತ್ತಮ್ ಜೈನ್ ಏರುದನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ನೌಕರರನ್ನು ಹೊರಗೆ ಕಳುಹಿಸಬೇಕು ಹಾಗೂ ಕರ್ತವ್ಯ ಲೋಪದಡಿ ಅಮಾನತು ಮಾಡಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಹಾಗೂ ಉತ್ತಮ್ ಜೈನ್ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಅಭ್ಯರ್ಥಿ ವಿದ್ಯಾಧರ್ ದೂರಿನ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಎಂ.ಜಿ.ಸಂತೋಷ್ ಕುಮಾರ್ ಸಿಬ್ಬಂದಿ, ಉಮೇಶ್ ಅವರನ್ನು ಬದಲಿಸಿ ಬೇರೊಬ್ಬರನ್ನು ನಿಯೋಜಿಸಿ ಗೊಂದಲಕ್ಕೆ ತೆರೆ ಎಳೆದರು.
ಇನ್ನೊಂದೆಡೆ 9ನೇ ವಾರ್ಡ್‌ನ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಸಹೋದರ ಪ್ರಸನ್ನ ಶನಿವಾರ ಸಾವನ್ನಪ್ಪಿದ್ದು, ಕುಟುಂಬ ಶೋಕದಲ್ಲಿ ಮುಳುಗುವಂತೆ ಮಾಡಿತು. 8 ವಾರ್ಡ್‌ನ ಅಭ್ಯರ್ಥಿಗಳ ಜತೆಗೆ ತಾಲೂಕಿನ ನಂದಿಹಳ್ಳಿ ಹಾಗೂ ಶಶಿವಾಳ, ಗ್ರಾಮ ಪಂಚಾಯಿತಿ ಮೂರು ಸ್ಥಾನಕ್ಕೂ ಶನಿವಾರ ಮತದಾನ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಮಂಗಳವಾರ ಫಲಿತಾಂಶ ಹೊರಬೀಳಲಿದೆ.