

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಘರಾಣೆಯ ಸ್ಥಾಪಕ ಸಿತಾರರತ್ನ ರಹಿಮತ ಖಾನ್‌ರ 70ನೇ ಪುಣ್ಯತಿಥಿ ಅಂಗವಾಗಿ ನಗರದ ಸೃಜನಾ ರಂಗಮ0ದಿರದಲ್ಲಿ ಆಯೋಜಿಸಿರುವ ಸಂಗೀತೋತ್ಸವದ 5ನೇ ದಿನವನ್ನು ಉಸ್ತಾದ್ ಮೆಹಬೂಬ ಖಾನ್‌ರಿಗೆ ಸಮರ್ಪಿಸಲಾಗಿತ್ತು.
ಸಂಜೆಯ ವೇದಿಕೆ ತುಂಬಿದವರು ಬೆಂಗಳೂರಿನ ಇಬ್ಬರು ಯುವ ಗಾನಪ್ರತಿಭೆಗಳಾದ ಕೌಶಿಕ್ ಐತಾಳ ಹಾಗೂ ಓಂಕಾರ ಹವಾಲ್ದಾರ. ಇವರಿಬ್ಬರ ಜುಗಲಬಂದಿ ಗಾಯನವು ಸಂಪೂರ್ಣ ಸೃಜನಾ ರಂಗಮ0ದಿರವು ಶೃಂಗಾರ ರಸದ ಪರಿಮಳದಿಂದ ಆವರಿಸಿತ್ತು. ತಮ್ಮ ಗಾಯನಕ್ಕೆ ಮುನ್ನುಡಿ ಬರೆದಿದ್ದು ರಾಗ ಯಮನ್ ಪ್ರಸ್ತುತಿಯೊಂದಿಗೆ. ವಿಲಂಬಿತ್ ಏಕತಾಲ್‌ನಲ್ಲಿ `ಕಾಹೇ ಸಖಿ ಕೈಸೆ...', ಧೃತ್ ತೀನತಾಲ್ ದಲ್ಲಿ `ಶ್ಯಾಮï ಬಜಾಯೆ,,, ಬಂದಿಶ್‌ಗಳು ನೆರೆದವರನ್ನು ಮಂತ್ರಮುಗ್ಧಗೊಳಿಸಿದವು.
ಮಾದಕತೆಯ ಸ್ವರಾಲಾಪದ ಪ್ರಸ್ತುತಿಯಿಂದ ಕೌಶಿಕ್ ಅವರ ಗಾಯನ ತುಂಬಿಕೊ0ಡರೆ, ಮನಮೋಹಕ ಸರಗಮಗಳ ರಂಜಕತೆಯೊ0ದಿಗೆ ಓಂಕಾರ ಅವರ ಗಾಯನ ಪ್ರಸ್ತುತಗೊಂಡಿದ್ದು ವಿಶೇಷವಾಗಿತ್ತು. ಇವರಿಗೆ ಕೇಶವ ಜೋಶಿ ತಬಲಾ ಹಾಗೂ ಸತೀಶ ಭಟ್ಟ ಹೆಗ್ಗಾರ ಹಾರ್ಮೋನಿಯಂ ಸಾಥ್ ನೀಡಿದರು.
ನಂತರ ಮೊಳಗಿದ್ದು ವಯೋಲಿನ್ ತಂತುಗಳ ಝೇಂಕಾರ. ಪುಣೆಯ ಹಿರಿಯ ವಯೋಲಿನ್ ವಾದಕ ಪಂ. ಅತುಲಕುಮಾರ ಉಪಾಧ್ಯೆ ಅವರು ತಮ್ಮ ಕಛೇರಿಯನ್ನು ಆರಂಭಿಸಿದ್ದು ಕೀರ್ವಾಣಿ ರಾಗದ ಪ್ರಸ್ತುತಿಯೊಂದಿಗೆ. ಆಲಾಪ, ಜೋಡ, ಝಲಾ ಮತ್ತು ವೈವಿಧ್ಯಮಯ ಗತ್‌ಗಳು ವಿದ್ವತ್ಪೂರ್ಣವಾಗಿ ಮೂಡಿಬಂದವು. ವಿಲಂಬಿತ್ ಲಯದ ಝಪತಾಲ್‌ನಲ್ಲಿ ಹಾಗೂ ಧೃತ್ ತೀನತಾಲದಲ್ಲಿ ಮೂಡಿಬಂದ ಮನಮೋಹಕ ಗತ್‌ಗಳು ಮುದ ನೀಡಿದವು.
ನಂತರ ಮಿಶ್ರಕಾಫಿ ರಾಗದಲ್ಲಿ ಮೂಡಿಬಂದ ಸುಮಧುರ ಧುನ್ ನೆರೆದ ಶ್ರೋತೃಗಳ ಹೃನ್ಮನ ಸೆಳೆ¬ತು. ನಂತರ `ಸಾವರೇ...' ಹಾಗೂ ಸುಪ್ರಸಿದ್ಧ `ತೀರ್ಥ ವಿಠ್ಠಲ ಕ್ಷೇತ್ರ ವಿಠ್ಠಲ....' ಮರಾಠಿ ಅಭಂಗ ವಯೋಲಿನ್ ತಂತುಗಳಿ0ದ ಹೊರಹೊಮ್ಮಿಸಿ ಕೇಳುಗರನ್ನು ತಲೆದೂಗುವಂತೆ ಮಾಡಿದರು.
ಇದಕ್ಕೆ ಅತ್ಯುತ್ತಮ ಲಗ್ಗಿ ಹಚ್ಚಿ ತಬಲಾ ಸಾಥ್ ನೀಡಿದ ಪಾಂಡುರ0ಗ ಪವಾರ ವಯೋಲಿನ್ ವಾದನದ ಸೌಂದರ್ಯವನ್ನು ದ್ವಿಗುಣಗಳಿಸಿದರು.