ಸಿತಾರರತ್ನ ರಹಿಮತ ಖಾನ್‌ರ 70ನೇ ಪುಣ್ಯತಿಥಿ, ಸಂಗೀತೋತ್ಸವ; ಸಿತಾರಗಳ ನಿನಾದ ಗಾಯನದ ಸುನಾದ

3 Dwd 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಿತಾರರತ್ನ ರಹಿಮತ ಖಾನ್‌ರ 70ನೇ ಪುಣ್ಯತಿಥಿ ಅಂಗವಾಗಿ ನಗರದ ಡಾ. ಅಣ್ಣಾಜಿರಾವ್ ಸಿರೂರ ಸೃಜನಾ ರಂಗಮ0ದಿರದಲ್ಲಿ ಆಯೋಜಿಸಿರುವ ಸಂಗೀತೋತ್ಸವದ 3ನೇ ದಿನವಾದ ಮಂಗಳವಾರದ ಕಾರ್ಯಕ್ರಮ ಧಾರವಾಡ ಘರಾಣೆಯ ಪ್ರೊ. ಅಬ್ದುಲ್ ಕರೀಮಖಾನ್‌ರಿಗೆ ಸಮರ್ಪಿತವಾಗಿತ್ತು.

ಆರಂಭದಲ್ಲಿ ಧಾರವಾಡದ ನೂರಜಹಾನ್ ನದಾಫ್ ಹಾಗೂ ಶ್ರುತಿ ಅರ್ಚಕ ಅವರ ದ್ವಂದ್ವ ಸಿತಾರ ವಾದನ ಮೂಡಿಬಂತು. ಅವರು ಕೀರ್ವಾನಿ ರಾಗವನ್ನು ಪ್ರಸ್ತುತಪಡಿಸಿದರು. ಉಸ್ತಾದ್ ನಿಸ್ಸಾರಅಹ್ಮದ್ ತಬಲಾ ಸಾಥ್ ನೀಡಿದರು.

ನಂತರ ಹುಬ್ಬಳ್ಳಿಯ ಕಿರಾನಾ ಘರಾನೆಯ ಪ್ರಬುದ್ಧ ಪ್ರತಿಭೆ ಪಂ. ಜಯತೀರ್ಥ ಮೇವುಂಡಿ ಅವರ ವಿದ್ವತ್ಪೂರ್ಣ ಗಾನಸುಧೆ ಹರಿದುಬಂತು. ಅವರು ಜೋಗಕೌಂಸ್ ರಾಗದ ಪ್ರಸ್ತುತಿಯೊಂದಿಗೆ ತಮ್ಮ ಸಂಗೀತ ಕಛೇರಿಗೆ ಮುನ್ನುಡಿ ಬರೆದರು. ವಿಲಂಬಿತ್ ಏಕತಾಲ್‌ನಲ್ಲಿ ಸದಾರಂಗ ವಿರಚಿತ `ಪರಮಸುಖ ಪಾಯೊ...' ಹಾಗೂ ತೀನತಾಲದಲ್ಲಿ `ಪ್ರಭು ಮೋರೆ...' ಬಂದಿಶ್‌ಗಳನ್ನು ಅತ್ಯಂತ ಮನಮೋಹಕವಾಗಿ ಸಾದರಪಡಿಸಿದರು.

ಬಳಿಕ ಜಯತೀರ್ಥ ಮೇವುಂಡಿ ಸುಹಾ ಕಾನ್ಹಡಾ ರಾಗದಲ್ಲಿ ಛೊಟಾ ಖ್ಯಾಲ್ ಪ್ರಸ್ತುತಪಡಿಸಿದರು. ದೃತ್ ತೀನತಾಲದಲ್ಲಿ ಮೂಡಿಬಂದ `ತೂ ಹೈ ಮೊಹ್ಮದಸಾ...' ಸದಾರಂಗ ವಿರಚಿತ ಬಂದಿಶ್ ಕರ್ಣಪ್ರಿಯವೆನಿಸಿತು. ನಂತರ ಮನಮೋಹಕ ಬಸಂತ ಬಹಾರ್ ರಾಗದಲ್ಲಿ ಸುಪ್ರಸಿದ್ಧ ಬಂದಿಶ್ `ಕೇತಕಿ ಗುಲಾಬ ಜೂಹಿ...' ಪ್ರಸ್ತುತಪಡಿಸಿದರು.

ತಬಲಾದಲ್ಲಿ ತ್ರಿಲೋಚನ ಕಂಪ್ಲಿ ಹಾಗೂ ಹಾರ್ಮೋನಿಯಂದಲ್ಲಿ ಭರತ ಹೆಗಡೆ ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net