

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳವಾರ ಬೆಂಗಳೂರಿನಿಂದ 7 ಸಾವಿರ ಡೋಸ್ ಕೋವಿಶೀಲ್ಡ್ ಲಸಿಕೆ ಬಂದಿದೆ.
ಬುಧವಾರದಿಂದ ತಾಲೂಕು, ಜಿಲ್ಲಾ ಆಸ್ಪತ್ರೆಯ ಜತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಉಪಕೇಂದ್ರ ಮಟ್ಟದಲ್ಲೂ ಲಸಿಕೆ ನೀಡಲಾಗುತ್ತದೆ.
ಜಿಲ್ಲೆಯಲ್ಲಿ ಮಂಗಳವಾರ 60 ವರ್ಷ ಮೇಲ್ಪಟ್ಟ 166 ಮಂದಿಗೆ ಮೊದಲನೇ ಡೋಸ್, 472 ಮಂದಿಗೆ ಎರಡನೇ ಡೋಸ್ ಲಸಿಕೆ ಹಾಕಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್, 39 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 3 ಮಂದಿ ್ರಂಟ್‌ಲೈನ್ ವರ್ಕರ್ಸ್ ಮೊದಲನೇ ಡೋಸ್, 27 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 45 ರಿಂದ 60 ವರ್ಷದೊಳಗಿನ 350 ಮಂದಿ ಮೊದಲನೇ ಡೋಸ್, 126 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಲಸಿಕೆ ಸೀಮಿತ ಸಂಖ್ಯೆಯಲ್ಲಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಕೆಲವು ಕೇಂದ್ರಗಳಲ್ಲಿ ಲಸಿಕೆ ನೀಡುವುದಿಲ್ಲ ಎಂಬ ಬೋರ್ಡ್ ಹಾಕಿದ್ದು ಕಂಡುಬಂತು.
ಎರಡನೇ ಡೋಸ್ ಲಸಿಕೆ ಲಭ್ಯ: ಉಡುಪಿ ಜಿಲ್ಲೆಯಲ್ಲಿ ಕೋವಿಶೀಲ್ಡ್ ಲಸಿಕೆ ದಾಸ್ತಾನು ಸಾಕಷ್ಟು ಇಲ್ಲದ ಕಾರಣ, ಪ್ರಥಮ ಡೋಸ್ ಪಡೆದು 8 ವಾರ ಮೀರಿದವರು ಒಟ್ಟು 947 ಫಲಾನುಭವಿಗಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಬೇಕಾಗಿದೆ. ಇದರಿಂದ ಪ್ರಥಮ ಡೋಸ್ ಪಡೆದು 8 ವಾರ ಮೀರಿದವರು ಆಶಾಕಾರ್ಯಕರ್ತೆಯರಿಗೆ ಕರೆ ಮಾಡಿ 2ನೇ ಡೋಸ್ ಲಸಿಕೆ ಪಡೆಯಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಲಭ್ಯವಿಲ್ಲ. ಸರಬರಾಜಾದ ತಕ್ಷಣ ಪ್ರಥಮ ಡೋಸ್ ಪಡೆದು 6 ವಾರ ಮೀರಿದವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಪ್ರಥಮ ಡೋಸ್ ಪಡೆದವರಿಗೆ ಆದ್ಯತೆ ಮೇರೆಗೆ 2ನೇ ಡೋಸ್ ನೀಡಲಾಗುವುದು. ಆಶಾಕಾರ್ಯಕರ್ತೆಯರು ಸಾರ್ವಜನಿಕರಿಗೆ ಮಾಹಿತಿ ನೀಡುವ ಮೂಲಕ ಪ್ರಥಮ ಡೋಸ್ ಲಸಿಕೆ ಪಡೆಯಲು ವ್ಯವಸ್ಥೆ ಮಾಡಲಿದ್ದಾರೆ. ಅಲ್ಲಿಯವರೆಗೆ ಪ್ರಥಮ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರು ಆಸ್ಪತ್ರೆಗೆ ಹೋಗದೆ ಲಸಿಕೆಗಾಗಿ ಕಾಯಬೇಕು ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.