

ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಹಾಗೂ ಕೋವಿಡ್ ಆರೈಕೆ ಕೇಂದ್ರ್ರಳಲ್ಲಿ 6,700 ರಿಂದ 7,000 ಹಾಸಿಗೆಗಳು ಕರೊನಾ ಸೋಂಕಿತರ ಚಿಕಿತ್ಸೆಗೆ ಲಭ್ಯವಾಗಲಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಸೋಂಕಿತರ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಸಹಕರಿಸುತ್ತಿಲ್ಲ ಎಂಬ ಅಪಸ್ವರ ಹಿನ್ನೆಲೆಯಲ್ಲಿ ಬುಧವಾರ ರಾಜಧಾನಿಯ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜತೆ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.
ಕೇಂದ್ರೀಕೃತ ವ್ಯವಸ್ಥೆ ಮೂಲಕ ಪ್ರತಿಯೊಂದು ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂಗಳಲ್ಲಿ ಲಭ್ಯವಿರುವ ಸಾಮಾನ್ಯ, ಐಸಿಯು ಬೆಡ್ಗಳು, ವೆಂಟಿಲೇಟರ್ ಸೌಲಭ್ಯ ಕುರಿತು ಕ್ಷಣಕಣದ ಮಾಹಿತಿ ತರಿಸಿಕೊಳ್ಳಲಾಗುವುದು. ರಿಯಲ್ ಟೈಮ್ ಆಧಾರದಲ್ಲಿ ಹಾಸಿಗೆಗಳು ಹಂಚಿಕೆಯಾಗಲಿದ್ದು, ಇದರಿಂದ ರೋಗಿಗಳು ಆಸ್ಪತ್ರೆಗಳಿಂದ ಆಸ್ಪತ್ರೆಗೆ ಅಲೆಯುವುದು ತಪ್ಪುತ್ತದೆ ಎಂದು ಹೇಳಿದರು.
ಆಂಟಿಜನ್ ಟೆಸ್ಟ್: ಕರೊನಾ ಸೋಂಕು ತ್ವರಿತ ಪತ್ತೆಗಾಗಿ ಆಂಟಿಜನ್ ಟೆಸ್ಟ್ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ. ವಾರಾಂತ್ಯದೊಳಗೆ 1 ಲಕ್ಷ ಆಂಟಿಜನ್ ಟೆಸ್ಟ್ ನಡೆಸುವುದಕ್ಕೆ ಅಗತ್ಯವಾದ ಆಂಟಿಜನ್ ಟೆಸ್ಟ್ ಕಿಟ್ ಲಭ್ಯವಾಗಲಿವೆ ಎಂದು ಸುಧಾಕರ್ ಹೇಳಿದರು.
ಸಿಎಂ ಸೂಚನೆಯಂತೆ ಬೆಂಗಳೂರಿನಲ್ಲಿ 500 ಆಂಬುಲೆನ್ಸ್ಗಳ ಸೇವೆ ದಿನದ 24 ತಾಸು ಲಭ್ಯವಾಗಲಿದ್ದು, ತೀವ್ರತರ ರೋಗ ಲಕ್ಷಣ ಉಳ್ಳವರಿಗೆ ಮಾತ್ರ ಬಳಸಿಕೊಳ್ಳಲಾಗುವುದು. ರೋಗಲಕ್ಷಣ ರಹಿತರಿಗೆ ಟೆಂಪೋಟ್ರಾವೆಲರ್ಗಳನ್ನು ಒದಗಿಸಬಹುದಾಗಿದೆ. ಆಂಬುಲೆನ್ಸ್ ಸೇವೆಯ ನಿರ್ವಹಣೆಯೂ ಕೇಂದ್ರೀಕೃತ ವ್ಯವಸ್ಥೆ, ಡ್ಯಾಶ್ ಬೋರ್ಡ್ ಬರಲಿದ್ದು, ಯಾವ ಸೋಂಕಿತರನ್ನು ಎಲ್ಲಿಗೆ ಕರೆದೊಯ್ಯಬೇಕು ಎನ್ನುವುದನ್ನು ರಿಯಲ್ ಟೈಮ್ ಆಧಾರದಲ್ಲಿ ನಿರ್ಧರಿಸಲಾಗುವುದು ಎಂದರು.
ಕೈಜೋಡಿಸಲು ಜನರಿಗೆ ಮನವಿ
ಕರೊನಾ ವಿರುದ್ಧದ ಹೋರಾಟದಲ್ಲಿ ರಾಜ್ಯ ಸರ್ಕಾರದ ಜತೆಗೆ ಜನರು ಕೈಜೋಡಿಸಬೇಕು. ಸೋಂಕಿತರ ಪತ್ತೆ ಕಾರ್ಯ, ರೋಗ ಲಕ್ಷಣವಿದ್ದರೆ ಭಯ ಪಡದೆ, ಮುಚ್ಚಿಡದೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹೋಂ ಕ್ವಾರಂಟೈನ್ ಕಟ್ಟುನಿಟ್ಟಾಗಿ ಪಾಲಿಸುವುದು. ಮಾಸ್ಕ್ ಧರಿಸುವುದು, ವ್ಯಕ್ತಿಗತ ಅಂತರ ಸೇರಿ ಇನ್ನಿತರ ಮುಂಜಾಗ್ರತಾ ಕ್ರಮಗಳನ್ನು ಪ್ರಾಮಾಣಿಕವಾಗಿ ಮಾಡಬೇಕಿದೆ ಎಂದು ಸಾರ್ವಜನಿಕರಲ್ಲಿ ಸುಧಾಕರ್ ಮನವಿ ಮಾಡಿದರು.
ಕರೆಂಟ್, ನೀರು ಕಟ್!
ಸಿಎಂ ಜತೆಗಿನ ಸಭೆಯಲ್ಲಿ ಒಪ್ಪಂದ ಆಗಿದ್ದಂತೆ ಖಾಸಗಿ ಆಸ್ಪತ್ರೆಗಳು ಶೇ.50 ಬೆಡ್ ನೀಡಬೇಕು. ಇಲ್ಲವಾದರೆ ಆಸ್ಪತ್ರೆಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಟ್ ಮಾಡಬೇಕಾಗುತ್ತದೆ. ಒಪಿಡಿ ಮುಚ್ಚಿಸಬೇಕಾಗುತ್ತದೆ. ಆಸ್ಪತ್ರೆ ಮಾನ್ಯತೆ ರದ್ದು ಮಾಡಲೂ ಹಿಂದೆಮುಂದೆ ನೋಡುವುದಿಲ್ಲ ಎಂದು ಆಸ್ಪತ್ರೆಯ ಮಾಲೀಕರಿಗೆ ಸುಧಾಕರ್ ಖಡಕ್ ಎಚ್ಚರಿಕೆ ನೀಡಿದರೆಂದು ಮೂಲಗಳು ತಿಳಿಸಿವೆ.
ಪುಣ್ಯಕೋಟಿ ಕಥೆ ಹೇಳಿದ ಸಚಿವರು
ಪುಣ್ಯಕೋಟಿ ಹಸುವಿನ ಪ್ರಾಮಾಣಿಕತೆಗೆ ಹುಲಿಯಂತಹ ಕ್ರೂರ ಮೃಗವೇ ಕರಗಿಹೋಗುತ್ತದೆ. ಅದೇ ರೀತಿ ಜನರಲ್ಲಿ ಧೈರ್ಯ, ಪ್ರಾಮಾಣಿಕತೆ ಹಾಗೂ ಸ್ವಯಂ ಪ್ರೇರಣಾ ಮನೋಭಾವವಿದ್ದರೆ ಮಾರಕ ಕರೊನಾ ಪಿಡುಗನ್ನು ಮಣಿಸಬಹುದು ಎಂದು ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.