700 ಸ್ವಸಹಾಯ ಗುಂಪುಗಳಿಗೆ 5 ಕೋಟಿ ರೂ. ಅನುದಾನ

MDG ladies
ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಪಂನಲ್ಲಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯನ್ನು ಒಕ್ಕೂಟದ ಅಧ್ಯಕ್ಷೆ ಪ್ರೇಮಾ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಸ್ವಾತಿಶ್ರೀ, ಕೆ.ಆರ್.ದಿನೇಶ್, ಶಾಲಿನಿ, ಶೋಭಾ, ನಂಜಯ್ಯ ಇತರರಿದ್ದರು.
Published on

ಮೂಡಿಗೆರೆ: ತಾಲೂಕಿನ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸಂಜೀವಿನಿ ಒಕ್ಕೂಟ ರಚಿಸಲಾಗಿದ್ದು, 700 ಸ್ವಸಹಾಯ ಗುಂಪುಗಳಿವೆ. ಅವುಗಳಿಗೆ ಸರ್ಕಾರದಿಂದ 5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ತಾಲೂಕು ವ್ಯವಸ್ಥಾಪಕಿ ಶಾಲಿನಿ ತಿಳಿಸಿದರು.

ಕಿರುಗುಂದ ಗ್ರಾಪಂನಲ್ಲಿ ಶುಕ್ರವಾರ ನಡೆದ ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಂಜೀವಿನಿ ಒಕ್ಕೂಟ ಮಹಿಳೆಯರಿಗೆ ಸಾಲ ನೀಡುವ ಸಂಸ್ಥೆಯಲ್ಲ. ಮಹಿಳೆಯರ ಸಬಲೀಕರಣಕ್ಕಾಗಿ ಸಹಾಯಧನ ನೀಡಲಾಗುತ್ತದೆ ಎಂದರು.

ಸ್ವಸಹಾಯ ಗುಂಪಿನ ಮಹಿಳೆಯರಿಗೆ ಸಮುದಾಯ ಬಂಡವಾಳದಿಂದ ಹಲವು ಕಾರ್ಯಕ್ರಮಗಳನ್ನು ನಡೆಸಲು ಅನುದಾನ ನೀಡಲಾಗುವುದು. ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಮಾಸಿಕ ಸಂತೆ ಅಲ್ಲಲ್ಲಿ ನಡೆಯುತ್ತಿದೆ. ಅಣಬೆ ಬೇಸಾಯ ಸಹಿತ ಹಲವು ರೀತಿಯಲ್ಲಿ ಒಕ್ಕೂಟದ ಸದಸ್ಯರಿಗೆ ತರಬೇತಿ ನೀಡಲಾಗುವುದು. ಕಿರುಬಂಡವಾಳ ಯೋಜನೆ ಮೂಲಕ ಶೂನ್ಯ ಬಡ್ಡಿಯಲ್ಲಿ ಸಂಘದ ಮಹಿಳೆಯರಿಗೆ 40 ಸಾವಿರ ರೂ. ಸಾಲ ನೀಡಲಾಗುವುದು. ಸರ್ಕಾರದಿಂದ ತಾಲೂಕಿನ 15 ಗ್ರಾಪಂ ವ್ಯಾಪ್ತಿಯ ಸಂಜೀವಿನಿ ಒಕ್ಕೂಟಕ್ಕೆ ತಲಾ 1 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಇದರಿಂದ ದುರ್ಬಲ ವರ್ಗದ ಮಹಿಳೆಯರಿಗೆ 5 ಸಾವಿರ ರೂ. ನೀಡಲು ಅವಕಾಶವಿದೆ ಎಂದು ತಿಳಿಸಿದರು.

ಸಂಘದ ಮಹಿಳೆಯರು ಅಪಘಾತದಿಂದ ಗಾಯಗೊಂಡರೆ 5 ಸಾವಿರ ರೂ. ಉಚಿತವಾಗಿ ನೀಡಲಾಗುವುದು. ಒಕ್ಕೂಟದ ಮಹಿಳೆಯರಿಗೆ ಜೈವಿಕ ಗೊಬ್ಬರ ತಯಾರಿಕೆ ಪರಿಕರ ಒದಗಿಸಲಾಗುವುದು. ಕೃಷಿ ಚಟುವಟಿಕೆ ಮತ್ತು ಜೈವಿಕ ಗೊಬ್ಬರ ತಯಾರಿಕೆ, ಹೈನುಗಾರಿಕೆಗೆ ಕೃಷಿ ವಿಜ್ಞಾನ ಕೇಂದ್ರದಿಂದ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಲಿಂಗತ್ವ ವೇದಿಕೆ ಸ್ಥಾಪಿಸಲಾಗಿದೆ. ಗ್ರಾಪಂ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಪೊಲೀಸರು ಈ ವೇದಿಕೆಯ ಸದಸ್ಯರಾಗಿರುತ್ತಾರೆ. ಬಾಲ್ಯ ವಿವಾಹ ತಡೆಗಟ್ಟುವ ಜತೆಗೆ ಇತರ ಸಮಸ್ಯೆಗಳಿಗೆ ವೇದಿಕೆಯಿಂದ ಪರಿಹಾರ ಒದಗಿಸಲಾಗುತ್ತಿದೆ. ಎನ್‌ಸಿಆರ್‌ಪಿ ಮೂಲಕ ಆರೋಗ್ಯ, ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತದೆ. ಪ್ರತಿ ಗ್ರಾಪಂ ವ್ಯಾಪ್ತಿಯ ಸಂಜೀವಿನಿ ಒಕ್ಕೂಟದಲ್ಲಿ ಕೃಷಿ ಸಖಿ ಮತ್ತು ಪಶು ಸಖಿಯರನ್ನು ನೇಮಿಸಲಾಗಿದೆ. ಅವರಿಗೆ ಸರ್ಕಾರದಿಂದ ಮಾಸಿಕ ಗೌರವಧನ ಸಂದಾಯವಾಗುತ್ತದೆ. ಅವರು ಪ್ರತಿ ಗ್ರಾಮಗಳಿಗೆ ತೆರಳಿ ಕೃಷಿ ಚಟುವಟಿಕೆ ಮತ್ತು ಹೈನುಗಾರಿಕೆ ಬಗ್ಗೆ ಎಚ್ಚರ ವಹಿಸಿ ರೈತರಿಗೆ ತಿಳುವಳಿಕೆ ಹೇಳಲಿದ್ದಾರೆ ಎಂದು ಶಾಲಿನಿ ತಿಳಿಸಿದರು.

ಕಿರುಗುಂದ ಗ್ರಾಪಂ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪ್ರೇಮಾ, ಗ್ರಾಪಂ ಅಧ್ಯಕ್ಷೆ ಸ್ವಾತಿಶ್ರೀ, ಸದಸ್ಯರಾದ ಕೆ.ಆರ್.ದಿನೇಶ್, ಪೂರ್ಣಿಮಾ, ಇಂದಿರಾ, ಕಾರ್ಯದರ್ಶಿ ನಂಜಯ್ಯ, ಮಾಜಿ ಅಧ್ಯಕ್ಷ ಯು.ಎಚ್.ರಾಜಶೇಖರ್, ಸಂಸ್ಥೆ ಮೇಲ್ವಿಚಾರಕರಾದ ಅಬ್ದುಲ್ ನಾಜಿಮ್, ಅಭಿಜಿತ್, ಮುಖಂಡರಾದ ಅಬ್ಬಾಸ್, ಕೆ.ಕೆ.ರಾಮಯ್ಯ, ಕೆ.ಆರ್.ಲೋಕೇಶ್, ಒಕ್ಕೂಟದ ಪ್ರಮುಖರಾದ ಸುಜಾತಾ, ಸಾಧನಾ, ಅನಿತಾ, ರಮ್ಯಾ, ಶೋಭಾ, ಕಸ್ತೂರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net