

ಕನಕಪುರ: ನಗರದಲ್ಲಿ ವಿವಿಧ ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದು 17 ಸಾವಿರ ರೂ. ದಂಡ ವಿಧಿಸಿದ್ದಾರೆ.
ನಗರದಲ್ಲಿ ಸೋಮವಾರ ಮತ್ತು ಮಂಗಳವಾರ ನಿರಂತರವಾಗಿ ನಗರಸಭೆ ಪೌರಾಯುಕ್ತ ಎಂ.ಎಸ್.ಮಹದೇವ್ ನೇತೃತ್ವದಲ್ಲಿ ನಗರದ ಮುಸ್ಲಿಂ ಬ್ಲಾಕ್, ಕಲ್ಪತರು ಕಾಂಪ್ಲೆಕ್ಸ್ ಸೇರಿ ಫಾಸ್ಟ್ ಫುಡ್ ಕ್ಯಾಂಟೀನ್‌ಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಸಿಬ್ಬಂದಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡರು. ಅಲ್ಲದೇ, ಮುಸ್ಲಿಂ ಬ್ಲಾಕ್‌ನ ಎಸ್.ಎಲ್.ವಿ ಸ್ಟೋರ್ ಮಾಲೀಕರಿಗೆ 25 ಸಾವಿರ ರೂ. ದಂಡ ವಿಧಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಪೌರಾಯುಕ್ತ ಎಂ.ಎಸ್.ಮಹದೇವ್ ಮಾತನಾಡಿ, ವ್ಯಾಪಾರಿಗಳು ನಿಷೇಧಿತ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ಮಾಡಬಾರದು ಎಂದು ಹಲವು ಬಾರಿ ಸೂಚಿಸಲಾಗಿದೆ. ಫಾಸ್ಟ್‌ುಡ್ ಕ್ಯಾಂಟೀನ್‌ಗಳ ಮೇಲೆ ದಾಳಿ ಮಾಡಿದ ವೇಳೆ ತಿಂಡಿ ಪದಾರ್ಥದ ತಟ್ಟೆಗಳ ಮೇಲೆ ಪ್ಲ್ಲಾಸ್ಟಿಕ್ ಬಳಕೆ ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಬಳಸಬಾರದು. ಊಟ ತಿಂಡಿಗೆ ಬಾಳೆ ಎಲೆ ಬಳಸಲು ಸೂಚಿಸಲಾಗಿದೆ, ಬೀದಿ ಬದಿ ವ್ಯಾಪಾರಿಗಳಿಗೂ ದಂಡ ವಿಧಿಸಲಾಗಿದೆ ಎಂದರು.
ಈ ಹಿಂದೆಯೂ ನಗರಸಭೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸ್ ಇಲಾಖೆ ಸೇರಿ ಜಂಟಿ ಕಾರ್ಯಾಚರಣೆಯಲ್ಲಿ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸಿದ್ದಲ್ಲದೇ, ಆದೇಶ ಪಾಲನೆಗೆ ಕ್ರಮ ಕೈಗೊಳ್ಳಲು ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಕಾರ್ಯಾಚರಣೆ ವೇಳೆ ಪ್ರಕರಣಗಳನ್ನು ದಾಖಲಿಸಿದ್ದರೂ, ಪ್ಲಾಸ್ಟಿಕ್ ನಿಷೇಧದ ಆದೇಶಕ್ಕೆ ಬೆಲೆ ಸಿಗುತ್ತಿಲ್ಲ. ಜನರಿಂದ ಪ್ಲಾಸ್ಟಿಕ್ ಬಳಕೆ ತಡೆಗೆ ನಿರೀಕ್ಷಿತ ಬೆಂಬಲ ದೊರಕುತ್ತಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ನ್ಯಾಯಾಲಯದ ಪ್ಲಾಸ್ಟಿಕ್ ನಿಷೇಧದ ಪಾಲನೆ ಮಾಡದೆ ಇರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪರಿಸರ ಇಂಜಿನಿಯರ್ ಟಿ.ಡಿ.ಧನಂಜಯ್ಯ, ಪ್ರಭಾರ ಹಿರಿಯ ಆರೋಗ್ಯ ನಿರೀಕ್ಷಕ ಮಲ್ಲಿಕಾರ್ಜುನ್, ಕಿರಿಯ ಅಧಿಕಾರಿ ಮನೋಜ್, ಪೌರಕಾರ್ಮಿಕ ಸಂಘದ ಅಧ್ಯಕ್ಷ ಜನಾರ್ಧನ ಹಾಗೂ ಕಚೇರಿ ಸಿಬ್ಬಂದಿ, ಪೌರಕಾರ್ಮಿಕರು ದಾಳಿಯಲ್ಲಿ ಪಾಲ್ಗೊಂಡಿದ್ದರು.