700 ಕೋಟಿ ರೂ. ವಸೂಲಿ ಮಾಡಿರುವುದು ನಿರೂಪಿಸಿದರೆ ನಾನು ರಾಜಕೀಯ ನಿವೃತ್ತಿ: CM Siddaramaiah

CM_Siddaramaiah
Published on

ಮೈಸೂರು: ನರೇಂದ್ರ ಮೋದಿ ಅಬಕಾರಿ ಇಲಾಖೆಯಲ್ಲಿ 700 ಕೋಟಿ ರೂ. ವಸೂಲಿ ಮಾಡಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಒಂದೇ ಒಂದು ರೂಪಾಯಿ ವಸೂಲಿ ಮಾಡಿರುವುದನ್ನು ನಿರೂಪಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ(CM Siddaramaiah) ಸವಾಲು ಹಾಕಿದರು.

ಮೈಸೂರಿನಲ್ಲಿ ಬುಧವಾರ(ನ.13) ಸುದ್ದಿಗಾರೊಂದಿಗೆ ಮಾತನಾಡಿದರು, ಅವರು ಪ್ರಧಾನ ಮಂತ್ರಿ ಸ್ಥಾನ ನೀಡಲು ಸಿದ್ಧರಿದ್ದಾರೆಯೇ? ಸುಳ್ಳು ಹೇಳಲು ಇತಿಮಿತಿ ಇರಬೇಕು. ಬಿಜೆಪಿಯವರ ಮೇಲೆ ಅನೇಕ ಆರೋಪಗಳಿವೆ. ಕರೊನಾ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಅವ್ಯವಹಾರಗಳ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಡಿ.ಕುನ್ಹಾ ಆಯೋಗ ವರದಿ ಸಲ್ಲಿಸಿದ್ದು, 330 ರೂ.ಗೆ ಸಿಗುವ ಪಿಪಿಇ ಕಿಟ್​ ಅನ್ನು 2,140 ರೂ.ಗೆ ಖರೀದಿ ಮಾಡಿದ್ದಾರೆ. ಇದಕ್ಕೆ ನರೇಂದ್ರ ಮೋದಿ ಏನು ಹೇಳುತ್ತಾರೆ? ಭ್ರಷ್ಟಾಚಾರ ಮಾಡಿರುವುದು ಅವರ ಸರ್ಕಾರ ಎಂದು ಸಿದ್ದು, ನಮ್ಮ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರವಾಗಿಲ್ಲ. ಭ್ರಷ್ಟಾಚಾರ ಮಾಡುವುದೂ ಇಲ್ಲ ಎಂದರು.

ಸಿದ್ದರಾಮಯ್ಯನನ್ನು ಗುರಿಯಾಗಿಸಿಕೊಂಡು ಪ್ರಧಾನಿ ಟೀಕೆ

ಪ್ರಧಾನಿ ಮೋದಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಕರ್ನಾಟಕವನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕರ್ನಾಟಕ ದೊಡ್ಡ ರಾಜ್ಯವಾಗಿದ್ದು, ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನು ಪಡೆದಿರುವುದರಿಂದ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಪ್ರಧಾನಿಯವರು ಗುರಿಯಾಗಿಸಿ ಟೀಕೆ ಮಾಡುತ್ತಿದ್ದಾರೆ ಎಂದರು.

ಸುಳ್ಳು ಆರೋಪಗಳ ಮೇಲೆ ಇಡಿ ತನಿಖೆ

ಇಡಿ ಕಾನೂನು ಪ್ರಕಾರ ಮುಡಾ ತನಿಖೆ ನಡೆಸಲಿ, ಅದಕ್ಕೆ ಯಾವುದೇ ರೀತಿಯ ಪ್ರತಿರೋಧವನ್ನು ನಾವು ಒಡ್ಡುವುದಿಲ್ಲ. ಇಡಿ ತನಿಖೆ ನಿಷ್ಪಪಕ್ಷಪಾತವಾಗಿ ನಡೆಯುತ್ತಿದೆಯೇ ಇಲ್ಲವೇ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಸುಳ್ಳು ಆರೋಪಗಳ ಮೇಲೆ ತನಿಖೆ ನಡೆಯುತ್ತಿದೆ ಎಂಬುದಷ್ಟೇ ಹೇಳಬಲ್ಲೇ ಎಂದರು.

ಸಿದ್ದರಾಮಯ್ಯನ ಸೊಕ್ಕು ಮುರಿಯುತ್ತೇವೆ’ ಎಂದಿರುವುದು ಸರಿಯೇ?

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಸಚಿವ ಜಮೀರ್ ಅಹ್ಮದ್ ಹೇಳಿಕೆಯ ಬಗ್ಗೆ ಉತ್ತರಿಸಿದ ಸಿಎಂ, ಮಾಜಿ ಪ್ರಧಾನಿ ದೇವೇಗೌಡರು ‘ಸಿದ್ದರಾಮಯ್ಯನ ಸೊಕ್ಕು ಮುರಿಯುತ್ತೇವೆ’ ಎಂದಿರುವುದು ಎಷ್ಟರ ಮಟ್ಟಿಗೆ ಸರಿ ? ಓರ್ವ ಮುಖ್ಯಮಂತ್ರಿಗೆ ಈ ರೀತಿ ಹೇಳುವುದು ಸರಿಯೇ ಎಂದು ಪ್ರಶ್ನಿಸಿ, ಜಮೀರ್ ಅಹ್ಮದ್ ಹಾಗೂ ಕುಮಾರಸ್ವಾಮಿ ಒಂದು ಕಾಲದಲ್ಲಿ ಆಪ್ತರಾಗಿದ್ದರು. ಆದರೆ, ಪ್ರಸ್ತುತ ಅವರ ನಡುವಿನ ಸಂಬಂಧ ಹೇಗಿದೆ ಎಂಬ ಬಗ್ಗೆ ನನಗೆ ತಿಳಿದಿಲ್ಲ ಎಂದರು.

ಬಿಜೆಪಿಗೆ ಕೋಮುಗಳ ನಡುವೆ ಬೆಂಕಿ ಹಚ್ಚುವುದೇ ಕೆಲಸ

ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಗುತ್ತಿಗೆಗಳಲ್ಲಿ ಮೀಸಲಾತಿ ನೀಡಿರುವಂತೆ ಮುಸ್ಲಿಮರಿಗೂ ಮೀಸಲಾತಿ ನೀಡಿ ಎಂದು ಬೇಡಿಕೆಯಿಟ್ಟಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ತೀರ್ಮಾನ ಸರ್ಕಾರ ತೆಗೆದುಕೊಂಡಿಲ್ಲ. ಬಿಜೆಪಿಯವರಿಗೆ ಕೋಮುವಾದವನ್ನು ಸೃಷ್ಟಿಸುವುದೇ ಕಾಯಕವಾಗಿದೆ. ಕೋಮುಗಳ ನಡುವೆ ಬೆಂಕಿ ಹಚ್ಚುವ ಕೆಲಸದಲ್ಲಿ ಅವರು ನಿರತರಾಗಿದ್ದಾರೆ. ಬಿಜೆಪಿಯವರೆಂದೂ ಸಮಾಜದಲ್ಲಿ ಶಾಂತಿ, ಸೋದರತ್ವ ನೆಲೆಸಬೇಕೆಂದು ಬಯಸಿದವರೇ ಅಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net