

ವಿಜಯಪುರ: ಇಲ್ಲಿನ ಪುರಸಭೆ ಹಳೇ ಕಾರ್ಯಾಲಯದ ಎದುರು ಹೊಸದಾಗಿ ನಿರ್ಮಿಸಿರುವ ಮಳಿಗೆಗಳಿಗೆ ಹಾನಿಯಾಗುತ್ತದೆ ಎಂಬ ಕಾರಣಕ್ಕಾಗಿ 70 ವರ್ಷ ಮರವನ್ನು ಕಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಟೆಂಡರ್ ಆಹ್ವಾನಿಸಿದ್ದಾರೆ. ಮರವನ್ನು ಕಡಿದು ಸಾಗಿಸಲು ಆನ್‌ಲೈನ್‌ನಲ್ಲಿ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ. ಇದು ಪರಿಸರ ಪ್ರೇಮಿಗಳನ್ನು ಕೆರಳಿಸಿದೆ.
ಬೃಹತ್ ಮರದ ಬೇರಿನಿಂದ ಮಳಿಗೆಗಳಿಗೆ ಹಾನಿಯಾಗುತ್ತದೆ ಎಂದು ಪುರಸಭೆ ಅಧಿಕಾರಿಗಳು ಮರವನ್ನು ಕಡಿಯಲು ಮುಂದಾಗಿದ್ದಾರೆ. 70 ವರ್ಷಕ್ಕೂ ಹೆಚ್ಚುಕಾಲ ಜನರಿಗೆ ನೆರಳು ನೀಡಿರುವುದಲ್ಲದೆ, ಅದರ ನೆರಳಿನಲ್ಲಿ ನೂರಾರು ಬೀದಿಬದಿ ವ್ಯಾಪಾರಿಗಳು ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇಂಥ ಮರವನ್ನು ಕಡಿಯುವುದು ಸರಿಯಲ್ಲ. ಅದನ್ನು ಹಾಗೆಯೇ ಉಳಿಸಬೇಕು ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.
ಮಳಿಗೆಗಳ ಪಕ್ಕದಲ್ಲಿ ಕಾಲುವೆ ಮಾಡಿದರೆ ಅಥವಾ ಚರಂಡಿ ಮಾಡಿದರೆ ಬೇರುಗಳು ಅಂಗಡಿಗಳಿಗೆ ಹಾನಿ ಮಾಡುವುದಿಲ್ಲ. ಇದನ್ನು ಮಾಡುವುದು ಬಿಟ್ಟು, ಮರವನ್ನೇ ಕತ್ತರಿಸಲು ಮುಂದಾಗಿರುವುದು ಸರಿಯಲ್ಲ ಎಂದು ಭಾರತೀಯ ಮಾನವಹಕ್ಕುಗಳ ಹಿತರಕ್ಷಣಾ ಸಮಿತಿಯ ತಾಲೂಕು ಉಪಾಧ್ಯಕ್ಷ ವೆಂಕಟರಮಣಪ್ಪ ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಹುವುದು. ಮರ ಗಟ್ಟಿಯಾಗಿದ್ದರೆ, ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಲಾಗುವುದು ಎಂದರು.
ಪುರಸಭೆ ನಿರ್ಮಿಸಿರುವ ಮಳಿಗೆಗಳಿಗೆ ಮರದ ಬೇರಿನಿಂದ ಹಾನಿಯಾಗುತ್ತಿದೆ. ಹಾಗಾಗಿ, ಆ ಮರವನ್ನು ಕಡಿಯಲು ಅರಣ್ಯ ಇಲಾಖೆ ಹರಾಜು ಪ್ರಕ್ರಿಯೆ ನಡೆಸಲು ಮುಂದಾಗಿದೆ. ಮೋಹನ್ ಕುಮಾರ್ ಪುರಸಭೆ ಮುಖ್ಯಾಧಿಕಾರಿ