

ಬ್ರಹ್ಮಾವರ: ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಗೊದ್ದನಕಟ್ಟೆಯ ಶೀನ ನಾಯ್ಕರು 70ರ ವಯಸ್ಸಿನಲ್ಲೂ ಭತ್ತದ ಕೃಷಿಯಲ್ಲಿ ಆಸಕ್ತಿ ಉಳಿಸಿಕೊಂಡಿದ್ದಾರೆ. ಭತ್ತ ಕೃಷಿಯಲ್ಲಿ ಹಲವು ಸಮಸ್ಯೆಗಳಿದ್ದರೂ ಅದಾವುದೂ ಅವರ ಆಸಕ್ತಿಯನ್ನು ಬತ್ತಿಸಿಲ್ಲ. ಹುಟ್ಟು ಕೃಷಿಕರಾದ ಶೀನ ನಾಯ್ಕರು ತಮ್ಮ ಸ್ವಂತ ಒಂದು ಎಕರೆ ಜಮೀನಿನಲ್ಲಿ ತೆಂಗು, ಅಡಕೆ, ಬಾಳೆ ಕೃಷಿ ಮಾಡುತ್ತಿದ್ದು ಸಾವಯವ ಪದ್ಧತಿಯಲ್ಲಿ ಉತ್ತಮ ಬೆಳೆ ತೆಗೆಯುತ್ತಿದ್ದಾರೆ. ಬೇರೆಯವರ ಹಡೀಲು ಬಿದ್ದ ಆರು ಎಕರೆ ಜಾಗದಲ್ಲಿ ಗೇಣಿಗೆ ಭತ್ತದ ಕೃಷಿ ಮಾಡುತ್ತಿದ್ದಾರೆ. ಜತೆಗೆ ತರಕಾರಿ ಕೂಡ ಬೆಳೆಸುತ್ತಿದ್ದಾರೆ.
ಈ ವರ್ಷ ಪೇತ್ರಿ ಮುಳ್ಳುಗುಡ್ಡೆಯ ಶಶಿಧರ ಶೆಟ್ಟಿ ಎಂಬುವರ ಖಾಲಿ ಗುಡ್ಡದಲ್ಲಿ ಸೋರೆ, ಹೀರೆ, ಬೆಂಡೆ ಮತ್ತು ಹಾಗಲ ಬೆಳೆದಿದ್ದು ಸೋರೆಕಾಯಿಯಲ್ಲಿ ಬಂಪರ್ ಬೆಳೆ ತೆಗೆದಿದ್ದಾರೆ. ಪ್ರತಿ ಮಂಗಳವಾರ ಮತ್ತು ಶನಿವಾರ ಪ್ರತಿ ಕೊಯ್ಲಿಗೆ 1200ಕ್ಕಿಂತಲೂ ಹೆಚ್ಚು ಸೋರೆಕಾಯಿ ಮಾರುಕಟ್ಟೆಗೆ ಒಯ್ಯುವಷ್ಟು ಬೆಳೆ ಬಂದಿದೆ. ಪ್ರತಿ ಸೋರೆಕಾಯಿಗೆ ಸುಮಾರು 20 ರೂ. ಬೆಲೆ ದೊರೆಯುತ್ತಿದೆ. ಇಳಿ ವಯಸ್ಸಿನಲ್ಲೂ ಒಬ್ಬರೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ತರಕಾರಿ ಕೊಯ್ಯಲು ಮಾತ್ರ ಬೇರೆ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಕೃಷಿಗೆ ಪೂರಕವಾಗುವಂತೆ ಐದು ದನಗಳನ್ನೂ ಸಾಕಿದ್ದಾರೆ. ಸಾವಯವ ಕೃಷಿ ಮಾಡುವ ಜತೆಗೆ ಉತ್ತಮ ಬೀಜಗಳನ್ನೂ ಸಿದ್ಧಪಡಿಸುತ್ತಾರೆ. ಕಾರ್ಕಳ, ಪಡುಬಿದ್ರಿ, ಬ್ರಹ್ಮಾವರ, ಕಟಪಾಡಿ ಮುಂತಾದ ಕಡೆಗೆ ಪೂರೈಸುತ್ತಾರೆ. ಇಬ್ಬರು ಪುತ್ರರು, ಪುತ್ರಿಯನ್ನು ಹೊಂದಿರುವ ನಾಯ್ಕರು ಕೃಷಿಯಿಂದಲೇ ತಮ್ಮ ಬಾಳು ಬೆಳಗಿರುವ ಧನ್ಯತೆ ಹೊಂದಿದ್ದಾರೆ.
ಪ್ರಸ್ತುತ ಭೂಮಿಯನ್ನು ಹಡೀಲು ಬಿಡುವವರೆ ಹೆಚ್ಚು. ಆದರೆ ಸ್ವಂತ ಭೂಮಿ ಕಡಿಮೆ ಇದ್ದರೂ ಇತರರ ಹಡೀಲು ಭೂಮಿ ಗೇಣಿಗೆ ಪಡೆದುಕೊಂಡು ಕೃಷಿ ಮಾಡುತ್ತಿರುವ ಶೀನ ನಾಯ್ಕರು ಇತರರಿಗೆ ಮಾದರಿ. ಇವರಿಗೆ ಕೃಷಿ ಇಲಾಖೆ ಮತ್ತು ಸರ್ಕಾರದ ಸವಲತ್ತುಗಳು ಸಿಗುವಂತಾಗಬೇಕು.
ಹರೀಶ್ ಶೆಟ್ಟಿ ಚೇರ್ಕಾಡಿ, ಚೇರ್ಕಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ
ಶೀನ ನಾಯ್ಕರು ನಿರುದ್ಯೋಗಿ ಯುವಕರಿಗೆ ಮಾದರಿ. ಕೃಷಿಯಿಂದ ಮಾನಸಿಕ, ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ತೃಪ್ತಿಕರ ಜೀವನ ನಡೆಸಲು ಸಾಧ್ಯ ಎನ್ನುವುದನ್ನು ಮಾಡಿ ತೋರಿಸಿದ್ದಾರೆ. ಶೀನ ನಾಯ್ಕರ ಶ್ರಮಕ್ಕೆ ಭೂಮಿ ತಾಯಿ ಉತ್ತಮ ಫಲ ನೀಡುತ್ತಿದ್ದು, ಸಂಬಂಧಿತ ಇಲಾಖೆ ಅವರಿಗೆ ಪ್ರೋತ್ಸಾಹ ನೀಡಬೇಕು.
ಕನ್ನಾರು ಕಮಲಾಕ್ಷ ಹೆಬ್ಬಾರ್, ಚೇರ್ಕಾಡಿ ಗ್ರಾಮ ಪಂಚಾಯಿತಿ ಸದಸ್ಯ
ಅನಂತ ನಾಯಕ್ ಮುದ್ದೂರು