ಬಿಬಿಎಂಪಿ ಕಾಲೇಜುಗಳಲ್ಲಿ ಶೇ.70 ಫಲಿತಾಂಶ

bbmp office
Published on

ಬೆಂಗಳೂರು: 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಿಬಿಎಂಪಿಯ ಕಾಲೇಜುಗಳಲ್ಲಿ ಶೇ. 70.15 ಫಲಿತಾಂಶ ದಾಖಲಾಗಿದೆ. ಹಿಂದಿನ ಸಾಲಿಗೆ ಹೋಲಿಸಿದರೆ ಫಲಿತಾಂಶದಲ್ಲಿ ಶೇ. 6.68 ಕುಸಿತ ಕಂಡಿದೆ.

ಪಾಲಿಕೆ ಒಡೆತನದಲ್ಲಿ 19 ಪದವಿಪೂರ್ವ ಕಾಲೇಜುಗಳಿದ್ದು, ಈ ಬಾರಿ ಒಟ್ಟು 2,345 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 1,645 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 160 ಮಂದಿ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಬೈರವೇಶ್ವರನಗರ ಪಿಯು ಕಾಲೇಜಿನಲ್ಲಿ ಶೇ. 92.29 ಫಲಿತಾಂಶ ದಾಖಲಾಗಿದೆ. ಒಟ್ಟು 8 ಕಾಲೇಜುಗಳಲ್ಲಿ ಶೇ.70ಕ್ಕಿಂತ ಅಧಿಕ ಲಿತಾಂಶ ಬಂದಿದೆ.

ಪ್ರತೀಕ್‌ಗೆ ಅತಿಹೆಚ್ಚು ಅಂಕ:

ಉತ್ತರಹಳ್ಳಿ ಪದವಿಪೂರ್ವ ಕಾಲೇಜಿನ ಪಿ.ಪ್ರತೀಕ್ 600ಕ್ಕೆ 585 ಅಂಕ (ಶೇ. 97.50) ಪಡೆದು ಪಾಲಿಕೆ ಕಾಲೇಜುಗಳಲ್ಲಿ ಅತ್ಯಧಿಕ ಮಾರ್ಕ್ಸ್ ಪಡೆದ ವಿದ್ಯಾರ್ಥಿ ಎನಿಸಿಕೊಂಡಿದ್ದಾರೆ. ಕಸ್ತೂರಿಬಾನಗರ ಕಾಲೇಜಿನ ಡಿ.ಲಿಖಿತ 600ಕ್ಕೆ 584 ಅಂಕ (ಶೇ. 97.33) ಹಾಗೂ ಪಾದರಾಯನಪುರ ಕಾಲೇಜಿನ ಹಾದಿಯಾ ತನ್ಜೀಮ್ 600ಕ್ಕೆ 580 ಅಂಕ (ಶೇ. 96.66) ಪಡೆದು ಗಮನ ಸೆಳೆದಿದ್ದಾರೆ.

ಈ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯೊಂದಿಗೆ ಉತ್ತೀರ್ಣರಾಗಿರುವ 160 ವಿದ್ಯಾರ್ಥಿಗಳಿಗೆ ತಲಾ 35 ಸಾವಿರ ರೂ. ಮೊತ್ತದ ಪ್ರೋತ್ಸಾಹಧನವನ್ನು ಪಾಲಿಕೆ ನೀಡಲಿದೆ ಎಂದು ಬಿಬಿಎಂಪಿ ಶಿಕ್ಷಣ ವಿಭಾಗದ ಉಪ ನಿರ್ದೇಶಕರು ತಿಳಿಸಿದ್ದಾರೆ.

ಪರೀಕ್ಷೆ ಬರೆದವರು - 2,345

ಉತ್ತೀರ್ಣರಾದವರು -1,645

ಉನ್ನತ ಶ್ರೇಣಿ ಪಡೆದವರು - 160

ಒಟ್ಟು ಫಲಿತಾಂಶ - ಶೇ. 70.15

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net