

ಕುಂದಾಪುರ: ಆನ್‌ಲೈನ್ ಶಿಕ್ಷಣ, ಖಾಸಗಿ ಶಾಲೆಗಳ ಶುಲ್ಕ ವಸೂಲಿ ಮೂಲಕ ರಾಜ್ಯವ್ಯಾಪಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸುದ್ದಿಯಾಗುತ್ತಿದ್ದು, ಆರ್ಥಿಕ ಸಂಕಷ್ಟಕ್ಕೆ ಕರೊನಾ ಬಲವಾದ ಹೊಡೆತ ನೀಡಿದೆ. ಈ ನಡುವೆ ವಿದ್ಯಾರ್ಥಿಗಳು ಶಾಲಾ ಶುಲ್ಕ ಕಟ್ಟಲಾಗದೆ ಸಂಕಷ್ಟದಲ್ಲಿರುವುದನ್ನು ಗಮನಿಸಿದ ಕುಂದಾಪುರ ಎಜುಕೇಶನ್ ಪ್ರವರ್ತಿತ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ತಮ್ಮ ಶಿಕ್ಷಣ ಸಂಸ್ಥೆಗಳ 70 ಲಕ್ಷ ರೂ. ಶುಲ್ಕವನ್ನು ಮನ್ನಾ ಮಾಡುವ ಮೂಲಕ ಮಕ್ಕಳ ನೆರವಿಗೆ ಬಂದಿದ್ದಾರೆ.
1.50 ಕೋಟಿ ರೂ. ಶುಲ್ಕ ಮಕ್ಕಳಿಂದ ಬಾಕಿಯಿದ್ದರೂ ದೊಡ್ಡ ಮೊತ್ತದ ಶುಲ್ಕ ಮನ್ನಾ ಮಾಡುವ ಮೂಲಕ ಇತರ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದ್ದಾರೆ. ಸೊಸೈಟಿ ನಾಲ್ಕು ಶಿಕ್ಷಣ ಸಂಸ್ಥೆ ಹೊಂದಿದ್ದು, ಪ್ರಾಥಮಿಕದಿಂದ ಪದವಿವರೆಗೆ ನಾಲ್ಕು ಸಂಸ್ಥೆ ಟ್ರಸ್ಟ್ ಮೂಲಕ ನಡೆಸುತ್ತಿದ್ದಾರೆ.
ಶಿಕ್ಷಣ ಗುಣಮಟ್ಟದಲ್ಲಿ ರಾಜಿಯಿಲ್ಲ. ಒತ್ತಡ ಹೇರಿ, ಬಲವಂತವಾಗಿ ಶುಲ್ಕ ತೆಗೆದುಕೊಳ್ಳುವ ಪರಿಪಾಠ ಹಿಂದಿನಿಂದಲೂ ಮಾಡಿಲ್ಲ. ಈ ಬಾರಿ ಕರೊನಾ ಎಲ್ಲರನ್ನು ಕಂಗೆಡಿಸಿದೆ. ಪಾಲಕರ ಕೈ ಖಾಲಿಯಾಗಿದೆ. ಮಕ್ಕಳಿಗೆ ಶಿಕ್ಷಣ ಕೊಡುವುದು ಅತ್ಯವಶ್ಯಕ ಎಂದು ಸುಕುಮಾರ್ ಶೆಟ್ಟಿ ವಿಜಯವಾಣಿಗೆ ತಿಳಿಸಿದ್ದಾರೆ. ಶಿಕ್ಷಕರಿಗೆ ವೇತನ, ಬಸ್ ನಿರ್ವಹಣೆ, ಸಿಬ್ಬಂದಿ ಸಂಬಳ 45 ಲಕ್ಷ ರೂ.ಪ್ರತೀ ತಿಂಗಳಿಗೆ ಖರ್ಚು ಬರುತ್ತದೆ. ಬೈಂದೂರು ಗ್ರಾಮೀಣ ಭಾಗದ ಶಾಲೆ, ಇಲ್ಲಿನ ಮಕ್ಕಳನ್ನು ಪ್ರತಿಭಾವಂತರನ್ನು ಮಾಡುವ ಗುರಿ ಇಟ್ಟುಕೊಂಡಿದ್ದೇವೆ. ಎಲ್ಲ ಮಕ್ಕಳಿಗೆ ಶಿಕ್ಷಣ ಕೊಡಿಸುವ ಅಗತ್ಯವಿದೆ. ಆರ್ಥಿಕವಾಗಿ ಸಬಲರಾಗಿರುವವರು ಶಾಲಾ ಶುಲ್ಕ ವಿಚಾರದಲ್ಲಿ ಚೌಕಾಶಿ ಮಾಡಬಾರದು ಎಂದು ಸುಕುಮಾರು ಶೆಟ್ಟಿ ಸಲಹೆ ತಿಳಿಸಿದ್ದಾರೆ.
ನಮ್ಮ ಶಿಕ್ಷಣ ಸಂಸ್ಥೆಯನ್ನು ಬೇರೆ ಸಂಸ್ಥೆಗಳಿಗೆ ಹೋಲಿಸಲು ಸಾಧ್ಯವಿಲ್ಲ. ಸಂಸ್ಥೆ ನಾಲ್ಕು ಬಾರಿ ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಿಸುತ್ತಿದ್ದು, ಎಲ್‌ಕೆಜಿಯಿಂದ 5ನೇ ತರಗತಿ ತನಕ 16ರಿಂದ 18 ಸಾವಿರ ಇದ್ದರೆ, 10ನೇ ತರಗತಿ ತನಕ 22ರಿಂದ 25 ಸಾವಿರದೊಳಗೆ ಶುಲ್ಕ ಇರುತ್ತದೆ. ಶಿಕ್ಷಣ ಸಂಸ್ಥೆ ಕೊನೆಯ ಬಾರಿ ಫಲಿತಾಂಶ ಪ್ರಕಟವಾದ ನಂತರ ಶುಲ್ಕ ಸಂಗ್ರಹಿಸುತ್ತಿದ್ದು, ಪರೀಕ್ಷೆಯಿಲ್ಲದೆ 1.50 ಕೋಟಿ ರೂ. ಕೊನೆಯ ಶುಲ್ಕ ಬಾಕಿಯಾಗಿದೆ. ಅತ್ಯಂತ ಬಡವರಿಂದ ಶುಲ್ಕ ತೆಗೆದುಕೊಳ್ಳುವುದಿಲ್ಲ. ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತೇವೆ. ಕೆಲವು ಕುಟುಂಬಗಳಿಂದ ಅರ್ಧ ಶುಲ್ಕ ಮತ್ತು ಶ್ರೀಮಂತರ ಮಕ್ಕಳಿಂದ ಪೂರ್ತಿ ಶುಲ್ಕ ತೆಗೆದುಕೊಳ್ಳುತ್ತೇವೆ. ಶಿಕ್ಷಣದ ಮೂಲಕ ಸಮಾನತೆ ಸಾಧ್ಯ ಎನ್ನುವುದು ನಮ್ಮ ಸಂಸ್ಥೆ ಹೆಜ್ಜೆ. ಬಿ.ಎಂ.ಸುಕುಮಾರ ಶೆಟ್ಟಿ ಶಾಸಕ ಬೈಂದೂರು, ಅಧ್ಯಕ್ಷ ಕುಂದಾಪುರ ಎಜುಕೇಶನ್ ಸೊಸೈಟಿ