

ಕಾರವಾರ: ಎಲ್ಲ ಗ್ಯಾರಂಟಿಗಳನ್ನು ಜಾರಿಗೆ ತಂದ ನಂತರ ಬೇರೆ ಅಭಿವೃದ್ಧಿ ಕಾರ್ಯಗಳನ್ನೂ ಮಾಡುತ್ತೇವೆ. ಬಿಜೆಪಿಯವರು ಮಾಡಿದ ಸಾಲವನ್ನೂ ತೀರಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್.ವೈದ್ಯ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಇಲ್ಲಿನ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಗೃಹ ಲಕ್ಷ್ಮೀ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ಪೆಟ್ರೋಲ್, ಡೀಸೆಲ್, ಆಹಾರದ ಬೆಲೆ ಗಗನಕ್ಕೇರಿದೆ. ಅದನ್ನು ಸರಿದೂಗಿಸಲು ನಾವು ಗ್ಯಾರಂಟಿ ಕೊಡುತ್ತಿದ್ದೇವೆ. ಕಾಂಗ್ರೆಸ್‌ನ ಯೋಜನೆಗಳು ಬಡವರ, ಸಾಮಾನ್ಯ ಜನರ ಕಾರ್ಯಕ್ರಮಗಳಾಗಿವೆ.
ಹಾಗಾಗಿ ನಾವು ಬೇರೆಲ್ಲ ಕೆಲಸ ಬಿಟ್ಟು 100 ದಿನದಲ್ಲಿ ಇಂಥ ಗ್ಯಾರಂಟಿ ಯೋಜನೆಗಳ ಜಾರಿಗೆ ಮುಂದಾಗಿದ್ದೇವೆ. ನಾವೆಲ್ಲೂ ಲೂಟಿ ಮಾಡುತ್ತಿಲ್ಲ. ಯಾವುದಕ್ಕೂ ಹಣದ ಕೊರತೆ ಇಲ್ಲ.
ಗೃಹ ಲಕ್ಷ್ಮೀ ಯೋಜನೆಯೊಂದಕ್ಕೇ ಜಿಲ್ಲೆಗೆ ಮಾಸಿಕ 70 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದ್ದೇವೆ. ನೀವು (ಬಿಜೆಪಿಗರು)ಮಾಡಿದ ದಿವಾಳಿಯನ್ನು ನಾವು ಸರಿಪಡಿಸುತ್ತಿದ್ದೇವೆ. ದಯಮಾಡಿ ಈಗಲಾದರೂ ಅಪಪ್ರಚಾರ ಮಾಡುವುದನ್ನು ಬಿಡಿ ಎಂದು ಬಿಜೆಪಿಗರನ್ನು ಕೇಳುತ್ತೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಸತೀಶ ಸೈಲ್, ಹಿಂದೆ ಬಿಜೆಪಿ ಸ್ತ್ರೀ ಶಕ್ತಿ ಸಂಘದ ಸಾಲ ಮನ್ನಾ ಮಾಡುತ್ತೇನೆ ಎಂದಿತ್ತು ಆದರೆ,ಜಾರಿ ಮಾಡಿಲ್ಲ. ಬಿಜೆಪಿ ಮರಳು ಮಾಡುವ ಪಕ್ಷವಾಗಿದೆ ಎಂದರು.
ಇದನ್ನೂ ಓದಿ:ಗೃಹಲಕ್ಷ್ಮೀ ಯೋಜನೆಗೆ ಚಾಲನೆ: ಹಣ ಜಮೆ ಕಂಡು ಮಹಿಳೆಯರು ಖುಷಿ
ಶಕುಂತಲಾ ಪೂಜಾರಿ ಪ್ರಾರ್ಥಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಡಾ. ಹುಲಿಗೆಮ್ಮ ಕುಕನೂರು ಸ್ವಾಗತಿಸಿದರು. ಶಿಕ್ಷಕ ಗಣೇಶ ಬಿಷ್ಠಣ್ಣನವರ್ ಕಾರ್ಯಕ್ರಮ ನಿರೂಪಿಸಿದರು. ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ, ಎಸ್‌ಪಿ ಎನ್.ವಿಷ್ಣುವರ್ಧನ ಇದ್ದರು.
ಮೆರವಣಿಗೆ: ಜಿಲ್ಲಾ ರಂಗ ಮಂದಿರದಿಂದ 1 ಕಿಮೀ ದೂರದ ಪೊಲೀಸ್ ಕಲ್ಯಾಣ ಮಂಟಪದವರೆಗೆ ಮೆರವಣಿಗೆ ನಡೆಸಲಾಯಿತು.
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಎಸಿ ಜಯಲಕ್ಷ್ಮೀ ರಾಯಕೋಡ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗೀಸ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಳ ಅವರು ಮೆರವಣಿಗೆಯಲ್ಲಿ ನಡೆದರು. ಮೆರವಣಿಗೆಯಲ್ಲಿ ಮಹಿಳಾ ಡೊಳ್ಳು ಕುಣಿತ ತಂಡಗಳ ಪ್ರದರ್ಶನ ಗಮನ ಸೆಳೆಯಿತು.
2.96 ಲಕ್ಷ ಫಲಾನುಭವಿಗಳು
ಜಿಲ್ಲೆಯಲ್ಲಿ 7.10 ಲಕ್ಷ ಮಹಿಳೆಯರು ಇದ್ದು, ಅವರಲ್ಲಿ 3.46 ಲಕ್ಷ ಮಹಿಳೆಯರು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿದ್ದಾರೆ. ಇದುವರೆಗೆ 2.96 ಮಹಿಳೆಯರು ( 85.38) ಯೋಜನೆಯಡಿ ಅಧಿಕೃತವಾಗಿ ನೋಂದಾಯಿಸಿಕೊಂಡಿದ್ದಾರೆ. ನೋಂದಣಿಯಲ್ಲಿ ಜಿಲ್ಲೆಯು ಮಟ್ಟದಲ್ಲಿ 10 ನೇ ಸ್ಥಾನದಲ್ಲಿದೆ. ಸದ್ಯ 1.17 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ತಲಾ 2 ಸಾವಿರದಂತೆ ಇಂದು ಅಥವಾ ನಾಳೆ 23.46 ಕೋಟಿ ರೂ.ಗಳನ್ನು ಜಮಾ ಮಾಡಲಾಗುವುದು. ಇದೇ ವಾರದಲ್ಲಿ ಉಳಿದವರ ಖಾತೆಗಳಿಗೂ ಹಣ ಜಮಾ ಆಗಲಿದೆ.