

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಬೆಚ್ಚಿ ಬೀಳಿಸುವಂತೆ ಮಾಡುತ್ತಿದೆ. ಗುರುವಾರ 75 ಜನರಿಗೆ ಸೋಂಕು ದೃಢಪಟ್ಟಿದ್ದು, 7 ಜನ ಮೃತಪಟ್ಟಿರುವುದು ವರದಿಯಾಗಿದೆ.
ಸತತ 2ನೇ ದಿನ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 75ರ ಗಡಿ ದಾಟಿರುವುದು ಆತಂಕ ಮೂಡಿಸಿದೆ. ಪ್ರಮುಖ ಬಡಾವಣೆಗಳಲ್ಲಿಯೇ ಸೋಂಕು ಸುಳಿದಾಡುತ್ತಿದ್ದು, ಇಡೀ ನಗರವನ್ನೇ ಆಪೋಶನ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹುಬ್ಬಳ್ಳಿಯ ಕೇಶ್ವಾಪುರ, ದೇಶಪಾಂಡೆನಗರ, ವಿದ್ಯಾನಗರ, ಗಣೇಶಪೇಟ, ಆದರ್ಶ ನಗರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿತ್ಯ ಹಲವು ಪ್ರಕರಣಗಳು ಪತ್ತೆಯಾಗುತ್ತಿವೆ. ಧಾರವಾಡದ ರೀಗಲ್ ವೃತ್ತ, ರಾಜಾಜಿನಗರದಲ್ಲಿ ಪಾಸಿಟಿವ್ ಪ್ರಕರಣಗಳು ಬಂದಿವೆ. ಕೋವಿಡ್ ಪಾಸಿಟಿವ್ ಹೊಂದಿದ್ದ ಜಿಲ್ಲೆಯ 6 ಹಾಗೂ ಹಾವೇರಿ ಜಿಲ್ಲೆಯ ಓರ್ವ ವ್ಯಕ್ತಿ ಸೇರಿ 7 ಜನ ಕಳೆದ 4 ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಗುರುವಾರದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಮಾದಾಪುರ ಗ್ರಾಮದ 55 ವರ್ಷದ ವ್ಯಕ್ತಿ ತೀವ್ರ ಉಸಿರಾಟದ ತೊಂದರೆಯಿಂದ ಜು. 2ರಂದು ದಾಖಲಾಗಿದ್ದರು. ಇವರು ಬುಧವಾರ ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಗಿರಣಿಚಾಳದ 88 ವರ್ಷದ ವೃದ್ಧ ತೀವ್ರ ಉಸಿರಾಟದ ತೊಂದರೆಯಿಂದ ಜು. 1ರಂದು ಚಿಕಿತ್ಸೆಗೆ ದಾಖಲಾಗಿದ್ದರು. ಜು. 3ರಂದು ಮೃತಪಟ್ಟಿದ್ದಾರೆ. ಮರಣೋತ್ತರ ಕೋವಿಡ್ ದೃಢಪಟ್ಟಿದೆ. ಹುಬ್ಬಳ್ಳಿ ಸೋನಿಯಾಗಾಂಧಿನಗರದ 65 ವರ್ಷದ ಪುರುಷ ನೆಗಡಿ, ಕೆಮ್ಮು, ಜ್ವರದಿಂದ ಜು. 7ರಂದು ಚಿಕಿತ್ಸೆಗೆ ದಾಖಲಾಗಿದ್ದರು. 8ರಂದು ಮೃತಪಟ್ಟಿದ್ದಾರೆ. ಹಳೇಹುಬ್ಬಳ್ಳಿ ಬಾಣತಿಕಟ್ಟಾದ 67 ವರ್ಷದ ವೃದ್ಧ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಜು. 4ರಂದು ದಾಖಲಾಗಿ, 8ರಂದು ಮರಣ ಹೊಂದಿದ್ದಾರೆ.
ಹುಬ್ಬಳ್ಳಿಯ ಕಮರಿಪೇಟ ಮುಲ್ಲಾ ಓಣಿಯ 78 ವರ್ಷದ ವೃದ್ಧೆ ನೆಗಡಿ, ಕೆಮ್ಮು, ಜ್ವರದಿಂದ ಜು. 6ರಂದು ಚಿಕಿತ್ಸೆಗೆ ದಾಖಲಾಗಿ ಅಂದೇ ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಬೀರಬಂದ್ ಓಣಿಯ 54 ವರ್ಷದ ವ್ಯಕ್ತಿ ಜು. 6ರಂದು ಚಿಕಿತ್ಸೆಗೆ ದಾಖಲಾಗಿ ಗುರುವಾರ ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಸಿದ್ಧಗಂಗಾ ಕಾಲನಿಯ 85 ವರ್ಷದ ವೃದ್ಧ ಕೆಮ್ಮು, ಜ್ವರದ ಚಿಕಿತ್ಸೆಗೆ ಜು. 5ರಂದು ರೈಲ್ವೆ ಆಸ್ಪತ್ರೆಗೆ ದಾಖಲಾಗಿದ್ದರು. 7ರಂದು ಮರಣ ಹೊಂದಿದ್ದಾರೆ. ಪಾರ್ಥಿವ ಶರೀರಗಳನ್ನು ನಿಯಮಾನುಸಾರ ಪ್ಯಾಕಿಂಗ್ ಮಾಡಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಒಂದೇ ಕುಟುಂಬದ 6 ಜನರಿಗೆ ಸೋಂಕು: ಕೇಶ್ವಾಪುರದ ಒಂದೇ ಕುಟುಂಬದ 6 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ. ಇವರೆಲ್ಲರ ಟ್ರಾವೆಲ್ ಹಿಸ್ಟರಿಯ ಮಾಹಿತಿ ಕಲೆ ಹಾಕಲಾಗುತ್ತಿದೆ. ಈಗಾಗಲೇ ಬಹಳಷ್ಟು ಕುಟುಂಬಗಳಿಗೆ ಸೋಂಕು ತಗುಲಿದೆ. ಮನೆಯಿಂದ ಹೊರಗಡೆ ಓಡಾಡದೇ ಇದ್ದರೂ ಅವರಿಗೆಲ್ಲ ಸೋಂಕು ತಗಲುತ್ತಿದೆ.
ಆಂಬುಲೆನ್ಸ್ಗೆ ಕಾಯುವ ಸ್ಥಿತಿ: ಕೋವಿಡ್ ಸೋಂಕು ದೃಢಪಟ್ಟು ಎರಡು ದಿನ ಗತಿಸಿದರೂ ಸೋಂಕಿತರನ್ನು ನಿಗದಿತ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್ಗಳಿಗೆ ಕರೆದೊಯ್ಯುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಅದೆಷ್ಟೋ ಸೋಂಕಿತರಿಗೆ ಇದರ ಅನುಭವವಾಗಿದೆ. ಸೋಂಕಿತರನ್ನು ನಿಗದಿತ ಸ್ಥಳಕ್ಕೆ ಕರೆದೊಯ್ಯದೇ ಇರುವುದರಿಂದ ಇಡೀ ಕುಟುಂಬಕ್ಕೆ ಮತ್ತಷ್ಟು ಸೋಂಕು ಹರಡುವ ಸಾಧ್ಯತೆ ದಟ್ಟವಾಗಿದೆ. ಗುರುವಾರದಂದು 1 ತಿಂಗಳ ಅವಧಿಯ ಇಬ್ಬರು ಹಸುಳೆಯರು ಸೇರಿ 6 ಜನ ಮಕ್ಕಳಿಗೆ ಸೋಂಕು ದೃಢಪಟ್ಟಿರುವುದು ಆಘಾತ ಮೂಡಿಸಿದೆ.
ಜಿಲ್ಲೆಯಲ್ಲಿ 832ಕ್ಕೇರಿದ ಸೋಂಕಿತರ ಸಂಖ್ಯೆ
ಜಿಲ್ಲೆಯಲ್ಲಿ ಗುರುವಾರ 75 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 832ಕ್ಕೆ ಏರಿಕೆಯಾಗಿದೆ. ಕರೊನಾಕ್ಕೆ ಬಲಿಯಾದವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಗುರುವಾರ ಪತ್ತೆಯಾದ ಪ್ರಕರಣಗಳ ಮಾಹಿತಿ: ಹುಬ್ಬಳ್ಳಿಯ ಕೇಶ್ವಾಪುರದ 58 ವರ್ಷದ ಮಹಿಳೆಯ ಸಂಪರ್ಕದಿಂದ ಅದೇ ಪ್ರದೇಶದ 5 ವರ್ಷದ ಬಾಲಕಿ, 1, ವರ್ಷದ ಬಾಲಕಿ, 56 ವರ್ಷದ ಮಹಿಳೆ, 1 ತಿಂಗಳ ಹೆಣ್ಣು ಮಗು, 25 ವರ್ಷದ ಮಹಿಳೆ, 33 ವರ್ಷದ ಪುರುಷ, 9 ವರ್ಷದ ಬಾಲಕಿ, 43 ವರ್ಷದ ಮಹಿಳೆ, ಸದಾಶಿವನಗರದ 14 ವರ್ಷ ಬಾಲಕ, ಧಾರವಾಡ ಶಿವಗಿರಿಯ 36 ವರ್ಷದ ಪುರುಷನ ಸಂಪರ್ಕದಿಂದ ದೇಶಪಾಂಡೆನಗರದ 19 ವರ್ಷದ ಯುವತಿ, ನೇಕಾರನಗರದ 30 ವರ್ಷದ ಪುರುಷನ ಸಂಪರ್ಕದಿಂದ ಮಿಷನ್ ಕಾಂಪೌಂಡ್ನ 50 ವರ್ಷದ ಪುರುಷ, ಗುರುನಾಥನಗರದ 60 ವರ್ಷದ ಪುರುಷನ ಸಂಪರ್ಕದಿಂದ ಅದೇ ಪ್ರದೇಶದ 50 ವರ್ಷದ ಮಹಿಳೆ, ಆದರ್ಶನಗರದ 73 ವರ್ಷದ ವೃದ್ಧನ ಸಂಪರ್ಕದಿಂದ ಅದೇ ಪ್ರದೇಶದ 19 ವರ್ಷದ ಯುವಕ, 69 ವರ್ಷದ ವೃದ್ಧೆ, ಧಾರವಾಡ ಮಾನೆ ಚಾಳದ 80 ವರ್ಷದ ವೃದ್ಧನ ಸಂಪರ್ಕದಿಂದ 2 ವರ್ಷದ ಬಾಲಕಿ, ಹುಬ್ಬಳ್ಳಿ ನಾರಾಯಣಸೋಫಾದ 43 ವರ್ಷದ ಪುರುಷನ ಸಂಪರ್ಕದಿಂದ ಅದೇ ಪ್ರದೇಶದ 12 ವರ್ಷದ ಬಾಲಕಿ, ಸದರಸೋಫಾದ 76 ವರ್ಷದ ಪುರುಷನ ಸಂಪರ್ಕದಿಂದ ಅದೇ ಪ್ರದೇಶದ 50 ಹಾಗೂ 27 ವರ್ಷದ ಪುರುಷರು ಹಾಗೂ 45 ವರ್ಷದ ಮಹಿಳೆ, ಹುಬ್ಬಳ್ಳಿ ವಡ್ಡರ ಓಣಿಯ 45 ವರ್ಷದ ಪುರುಷನ ಸಂಪರ್ಕದಿಂದ ಗಣೇಶಪೇಟೆಯ 27 ವರ್ಷದ ಪುರುಷ, ಕಲಘಟಗಿ ತಾಲೂಕು ದಾಸ್ತಿಕೊಪ್ಪದ 41 ವರ್ಷದ ಪುರುಷನ ಸಂಪರ್ಕದಿಂದ ಅದೇ ಗ್ರಾಮದ 5 ವರ್ಷದ ಬಾಲಕಿ, 60 ವರ್ಷದ ಮಹಿಳೆ, 34 ವರ್ಷದ ಮಹಿಳೆ, 28 ವರ್ಷದ ಮಹಿಳೆ ಸೋಂಕಿತರಾಗಿದ್ದಾರೆ. ಕುಂದಗೋಳ ತಾಲೂಕಿನ ಹರ್ಲಾಪುರದ 38 ವರ್ಷದ ಪುರುಷ ಗದಗ ಜಿಲ್ಲಾ ಪ್ರವಾಸ ಹಿನ್ನೆಲೆ ಹೊಂದಿದ್ದಾರೆ.
ನೆಗಡಿ, ಕೆಮ್ಮು, ಜ್ವರ, ಉಸಿರಾಟದ ತೊಂದರೆ: ಹುಬ್ಬಳ್ಳಿಯ ಯಲ್ಲಾಪುರ ಓಣಿ ಕೆ.ಬಿ. ನಗರದ 20 ವರ್ಷದ ಯುವತಿ, ದೇಶಪಾಂಡೆನಗರದ 31 ವರ್ಷದ ಪುರುಷ, ಮಂಟೂರ ರಸ್ತೆಯ 75 ವರ್ಷದ ವೃದ್ಧ, ಉಪನಗರ ಠಾಣೆ ಬಳಿಯ 31 ವರ್ಷದ ಪುರುಷ, ಸದರಸೋಫಾ ನಿವಾಸಿ 60 ವರ್ಷದ ವೃದ್ಧ ಕುಂದಗೋಳ ತಾಲೂಕು ಮಳಲಿ ಗ್ರಾಮದ 30 ವರ್ಷದ ಪುರುಷ, ದೇಶಪಾಂಡೆನಗರದ 25 ವರ್ಷದ ಮಹಿಳೆ, ಗೋಕುಲ ರಸ್ತೆಯ 21 ವರ್ಷದ ಪುರುಷ, ಈಶ್ವರನಗರದ 65 ವರ್ಷದ ಮಹಿಳೆ, ಕಲಘಟಗಿ ಪಟ್ಟಣದ 32 ವರ್ಷದ ಪುರುಷ, ಹಳೇಹುಬ್ಬಳ್ಳಿ ಬೀರಬಂದ ಓಣಿಯ 54 ವರ್ಷದ ಪುರುಷ, ಕೇಶ್ವಾಪುರ ಸಿದ್ಧಗಂಗಾ ಕಾಲನಿಯ 85 ವರ್ಷದ ವೃದ್ಧ, ದೇಶಪಾಂಡೆನಗರದ 42 ವರ್ಷದ ಪುರುಷ, ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ 50 ವರ್ಷದ ಪುರುಷ, ಸಿದ್ಧಗಂಗಾ ಕಾಲನಿಯ 46 ವರ್ಷದ ಪುರುಷ, 34 ವರ್ಷದ ಪುರುಷ, ವಿಜಯಪುರದ ದೇವರಹಿಪ್ಪರಗಿಯ 56 ವರ್ಷದ ಪುರುಷ, ಕೇಶ್ವಾಪುರ ಫೆಸಿಫಿಕ್ ಅಪಾರ್ಟ್ವೆುಂಟ್ನ 33 ವರ್ಷದ ಮಹಿಳೆ, ಮಾರುತಿ ಗಲ್ಲಿಯ 35 ವರ್ಷದ ಮಹಿಳೆ, ಧಾರವಾಡ ರವಿವಾರಪೇಟೆಯ 46 ವರ್ಷದ ಪುರುಷ, ಕೇಶ್ವಾಪುರದ 29 ವರ್ಷದ ಯುವತಿ, ಕುಸುಗಲ್ ಗ್ರಾಮದವರಾದ 18 ವರ್ಷದ ಯುವಕ, 14 ವರ್ಷದ ಬಾಲಕ, 38 ವರ್ಷದ ಪುರುಷ, 10 ವರ್ಷದ ಬಾಲಕಿ, ಮಂಟೂರ ರಸ್ತೆಯ 65 ವರ್ಷದ ವೃದ್ಧ, ಧಾರವಾಡ ಸಾರಸ್ವತಪುರದ 48 ವರ್ಷದ ಮಹಿಳೆ, ಧಾರವಾಡ ನೆಹರೂನಗರ 6ನೇ ಕ್ರಾಸ್ನ 29 ವರ್ಷದ ಮಹಿಳೆ, ಹುಬ್ಬಳ್ಳಿಯ ಚೇತನಾ ಕಾಲನಿಯ 48 ವರ್ಷದ ಪುರುಷ, ಧಾರವಾಡ ಲಕ್ಷ್ಮೀ ದೇವಸ್ಥಾನ ಬಳಿಯ 33 ವರ್ಷದ ಪುರುಷ, ಧಾರವಾಡ ಕೆಲಗೇರಿ ಆಂಜನೇಯನಗರದ 19 ವರ್ಷದ ಯುವಕ, ಹೆಗ್ಗೇರಿಯ 58 ವರ್ಷದ ಪುರುಷ, ಅಕ್ಷಯ ಪಾರ್ಕ್ನ 47 ವರ್ಷದ ಪುರುಷ, ಬೀರಬಂದ್ ಓಣಿಯ 40 ವರ್ಷದ ಮಹಿಳೆ ನೆಗಡಿ, ಕೆಮ್ಮು, ಜ್ವರ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಪರ್ಕ ಪತ್ತೆ ಮಾಡಲಾಗುತ್ತಿರುವ ಪ್ರಕರಣಗಳು: ಹಳೇ ಹುಬ್ಬಳ್ಳಿಯ 50 ವರ್ಷ ಮಹಿಳೆ, ದೇಸಾಯಿ ಓಣಿಯ 40 ವರ್ಷದ ಪುರುಷ, ಶಿರೂರ ಪಾರ್ಕ್ನ 74 ವರ್ಷದ ಪುರುಷ, ದೇಶಪಾಂಡೆನಗರದ 45 ವರ್ಷದ ಮಹಿಳೆ, ಯಾದಗಿರಿ ಜಿಲ್ಲೆಯ 32 ವರ್ಷದ ಪುರುಷ, ಶಿರೂರ ಪಾರ್ಕ್ನ 16 ವರ್ಷದ ಬಾಲಕ, ಗೋಕುಲ ರಸ್ತೆಯ 65 ವರ್ಷದ ಪುರುಷ, ವಿದ್ಯಾನಗರ ಶೇಠ್ ಪ್ಲಾಜಾದ 30 ವರ್ಷದ ಪುರುಷ, ಮಂಟೂರ ರಸ್ತೆಯ 31 ವರ್ಷದ ಪುರುಷ, ಕುಂದಗೋಳ ತಾಲೂಕಿನ ಬೆಟದೂರ ಗ್ರಾಮದ 39 ವರ್ಷದ ಪುರುಷ, ಕುಂದಗೋಳ ತಾಲೂಕು ಹಂಚಿನಾಳದ 23 ವರ್ಷದ ಮಹಿಳೆ, ಹುಬ್ಬಳ್ಳಿ ನೇಕಾರನಗರದ 36 ವರ್ಷದ ಮಹಿಳೆ, ಹುಬ್ಬಳ್ಳಿಯ ಲಾಲಬಹಾದೂರ್ ಕಾಲನಿಯ 50 ವರ್ಷದ ಮಹಿಳೆ, ನೂಲ್ವಿಯ 45 ವರ್ಷದ ಪುರುಷ, ಶ್ರೀನಿವಾಸನಗರದ 44 ವರ್ಷದ ಪುರುಷ, ಧಾರವಾಡ ಕೆ.ಸಿ. ಪಾರ್ಕ್ ಬಳಿಯ 34 ವರ್ಷದ ಮಹಿಳೆ ಸೋಂಕಿತರಾಗಿದ್ದು, ಸಂಪರ್ಕ ಪತ್ತೆ ಮಾಡಲಾಗುತ್ತಿದೆ.
12 ಜನರಿಗೆ ಹೋಂ ಐಸೊಲೇಷನ್
ಧಾರವಾಡ: ಕೋವಿಡ್ ಸೋಂಕು ಇದ್ದರೂ ರೋಗ ಲಕ್ಷಣ ಇಲ್ಲದವರು ಮತ್ತು ಸೌಮ್ಯ ಲಕ್ಷಣವುಳ್ಳ ಜನರಿಗೆ ತಮ್ಮ ಮನೆಗಳಲ್ಲಿಯೇ ಪ್ರತ್ಯೇಕವಾಗಿ ಇದ್ದು ಟೆಲಿ ಕನ್ಸಲ್ಟೇಷನ್ ಮೂಲಕ ಚಿಕಿತ್ಸೆ ಪಡೆಯುವ ಅವಕಾಶ ಕಲ್ಪಿಸಿದ ಮೊದಲ ದಿನವೇ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ 12 ಜನ ಸ್ವಯಂಪ್ರೇರಣೆಯಿಂದ ಈ ಮಾದರಿಯ ಚಿಕಿತ್ಸೆ ಆಯ್ದುಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ 11 ಹಾಗೂ ಧಾರವಾಡದಲ್ಲಿ ಒಬ್ಬರು ಹೋಂ ಐಸೊಲೇಷನ್ ಚಿಕಿತ್ಸೆಗೆ ಒಳಪಟ್ಟಿದ್ದಾರೆ. ಕೋವಿಡ್ ದೃಢಪಟ್ಟ ನಂತರ ವೈದ್ಯರ ತಂಡವು ಪರಿಶೀಲಿಸಿ ಈ ಕುರಿತು ನಿರ್ಧಾರ ಕೈಗೊಂಡು ಶಿಫಾರಸು ಮಾಡುತ್ತದೆ. ಅದನ್ನು ಆಧರಿಸಿ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಆರೋಗ್ಯ ಸಿಬ್ಬಂದಿ ಪರಿಶೀಲಿಸುವ (ಟ್ರಯೇಜ್) ಅಂಶಗಳು: ಶರೀರದ ತಾಪಮಾನ, ನಾಡಿಮಿಡಿತಕ್ಕಾಗಿ ಪಲ್ಸ್ ಆಕ್ಸಿಮೀಟರ್, ರಕ್ತದಲ್ಲಿನ ಸಕ್ಕರೆ ಅಂಶ, ರಕ್ತದೊತ್ತಡ, ಆರೋಗ್ಯ ಸಮಸ್ಯೆಗಳನ್ನು ನಿರಂತರವಾಗಿ ಪರಿಶೀಲಿಸುತ್ತಾರೆ. ವ್ಯಕ್ತಿಯು ಲಕ್ಷಣ ರಹಿತ ಅಥವಾ ಸೌಮ್ಯಲಕ್ಷಣ ಹೊಂದಿದ್ದಾರೆ ಎಂದು ವೈದ್ಯಾಧಿಕಾರಿಗಳು ದೃಢಪಡಿಸುತ್ತಾರೆ. 38 ಡಿಗ್ರಿ ಸೆಲ್ಸಿಯಸ್ ಅಥವಾ 100.4 ಡಿಗ್ರಿ ಫ್ಯಾರನ್ಹೀಟ್ ಕಡಿಮೆ ಶರೀರ ತಾಪಮಾನ ಹೊಂದಿರಬೇಕು. ಆಮ್ಲಜನಕದ ಪರ್ಯಾಪ್ತತೆ ಶೇ. 95ಕ್ಕಿಂತ ಹೆಚ್ಚಿರಬೇಕು. 60 ವಯಸ್ಸಿಗಿಂತ ಕಡಿಮೆ ವಯೋಮಾನದವರಾಗಿರಬೇಕು. ವ್ಯಕ್ತಿಯು ಸ್ವಯಂ ಪ್ರೇರಿತವಾಗಿ ಮನೆಯಲ್ಲಿ ಪ್ರತ್ಯೇಕವಾಗಿ ಇರಲು ಒಪ್ಪಿ ಮುಚ್ಚಳಿಕೆ ಪತ್ರ ನೀಡಿದಾಗ ಈ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗುವುದು.
ವ್ಯಾಪಾರಸ್ಥರಿಂದ ಸ್ವಯಂ ಬಂದ್
ಹುಬ್ಬಳ್ಳಿ: ಕರೊನಾ ನಿಯಂತ್ರಣಕ್ಕೆ ಇಲ್ಲಿನ ಹಿರೇಪೇಟ ಭೂಸಪೇಟ, ಕಂಚಗಾರ ಗಲ್ಲಿ, ಅಕ್ಕಿಹೊಂಡ ಭಾಗದ ವ್ಯಾಪಾರಸ್ಥರು ಸಂಜೆ 5ಕ್ಕೆ ವ್ಯಾಪಾರ ಬಂದ್ ಮಾಡಲು ತೀರ್ವನಿಸಿದ್ದಾರೆ. ಗಣೇಶೋತ್ಸವ ಮಂಡಳಿಯಿಂದ ಗುರುವಾರ ಹಮ್ಮಿಕೊಂಡ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಂಜೆ 5ರಿಂದ ಕರ್ಫ್ಯೂ ಜಾರಿ ಮಾಡಿ: ರಾತ್ರಿ 8 ಗಂಟೆ ಬದಲು ಸಂಜೆ 5 ಗಂಟೆಯಿಂದಲೇ ಕರ್ಫ್ಯೂ ಜಾರಿಗೊಳಿಸುವಂತೆ ಒತ್ತಾಯಿಸಿ ಹುಬ್ಬಳ್ಳಿ ಸರಾಫ ಸಂಘ ಅಪರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಗುರುವಾರ ಮನವಿ ಮಾಡಿದೆ. ಇದರಿಂದ ಸೋಂಕು ಹರಡುವುದನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಎಂದು ಹೇಳಿದೆ.