

ಬೀದರ್: ಗುರುನಾನಕ ದೇವ ಜಯಂತ್ಯುತ್ಸವ ನಿಮಿತ್ತ ಪ್ರಸಕ್ತ ಸಾಲಿನ ಪಿಯುಸಿ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನ ನೀಡಲು ನಡೆಸಿದ್ದ `ಗುರುನಾನಕ ಟ್ಯಾಲೆಂಟ್ ಹಂಟ್' ಪರೀಕ್ಷೆಯಲ್ಲಿ 7 ವಿದ್ಯಾರ್ಥಿಗಳು ಪ್ರತಿಶತ ಅಂಕ ಪಡೆದು ಪಾಸಾಗಿದ್ದಾರೆ. ಇವರಿಗೆ ಎರಡು ವರ್ಷ ಪಿಯುಸಿ ಶಿಕ್ಷಣ ಸಂಪೂರ್ಣ ಉಚಿತವಾಗಿ ಸಿಗಲಿದೆ.
ಪರೀಕ್ಷೆಯಲ್ಲಿ 500ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಇದರಲ್ಲಿ ನರೇಶ ಬಿರಾದಾರ, ಸಾಗರ ರವೀಂದ್ರ, ಶೇಖ್ ಅದನಾನ ವಾಸೆ, ಶ್ರೇಯಾ ರೆಡ್ಡಿ, ಸ್ಟೇವನ್ ಜೋನ್, ಸಾಕ್ಷಿ ಮತ್ತು ರಾಜಶ್ರೀ ಅವರು ಪ್ರತಿಶತ ಫಲಿತಾಂಶ ಪಡೆದು ಫ್ರೀ ಪ್ರವೇಶ ಪಡೆದಿದ್ದಾರೆ.
ನಗರದ ಗುರುನಾನಕ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಸಂಸ್ಥೆ ಟ್ಯಾಲೆಂಟ್ ಹಂಟ್ ಪರೀಕ್ಷೆ ನಡೆಸಿತ್ತು. 7 ವಿದ್ಯಾರ್ಥಿಗಳು ಶೇ.100ಕ್ಕೆ ನೂರು ಅಂಕ ಪಡೆದು ಪ್ರತಿಭೆ ಪ್ರದರ್ಶಿಸಿದ್ದಾರೆ. ಇವರಿಗೆ ಉಚಿತ ವಿದ್ಯಾಭ್ಯಾಸ ಕೊಡಲಾಗುತ್ತದೆ. ಉಳಿದ ವಿದ್ಯಾರ್ಥಿಗಳಿಗೆ ಅವರು ಪಡೆದ ಅಂಕಗಳ ಅನುಸಾರ ಶುಲ್ಕದಲ್ಲಿ ರಿಯಾಯಿತಿ ನೀಡುವುದಾಗಿ ಹೇಳಿದರು.
ಶೈಕ್ಷಣಿಕ ಡೀನ್ ಬಿ.ಎ. ವರಪ್ರಸಾದ, ಪ್ರಾಚಾರ್ಯೆ ಅಪರಂಜಿನಿ, ಆಡಳಿತಾಧಿಕಾರಿ ಜಯಪ್ರಕಾಶ, ಗುರುನಾನಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಎನ್.ರಾಜು ಇದ್ದರು.