

ಕುಣಿಗಲ್: ರಾಜ್ಯ ಸರ್ಕಾರ ಈ ಬಾರಿ ಬೆಂಬಲ ಬೆಲೆ ಯೋಜನೆಯಡಿ 7 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ತೀಮಾರ್ನಿಸಿದ್ದು, ರಾಗಿ ಬೆಳೆಗಾರು ಯೋಜನೆಯನ್ನು ಸದ್ಬಳಸಿಕೊಳ್ಳಬೇಕು ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ತಿಳಿಸಿದರು.
ಪಟ್ಟಣದ ಆರ್ಎಂಸಿ ಆವರಣದಲ್ಲಿ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ ಪ್ರತಿ ಕ್ವಿಂಟಾಲ್ ರಾಗಿಗೆ ಬೆಂಬಲ ಬೆಲೆಯಾಗಿ 4,290 ರೂ. ನಿಗದಿ ಮಾಡಿದ್ದು, ಜಿಲ್ಲೆಯಲ್ಲಿ 2.33 ಲಕ್ಷ ಟನ್ ರಾಗಿ ಖರೀದಿ ಗುರಿ ಹೊಂದಲಾಗಿದೆ. ಇದರ ಭಾಗವಾಗಿ ತಾಲೂಕಿನಾದ್ಯಂತ ಈಗಾಗಲೇ 12,000 ರೈತರು ರಾಗಿ ಮಾರಾಟಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ತಾಲೂಕಿನ ರಾಗಿ ಕೇಂದ್ರಗಳಲ್ಲಿ ಸ್ಥಳಿಯ ರೈತರಿಗೆ ಮೊದಲು ಆದ್ಯತೆ ನೀಡಬೇಕು. ಯಾವುದೇ ಸಮಸ್ಯೆ ಉಂಟಾದರೂ ನನ್ನ ಗಮನಕ್ಕೆ ತರಬೇಕು ಎಂದರು. ಹೇಮಾವತಿ ಲಿಂಕ್ಕೆನಾಲ್ ಯೋಜನೆ ಮೂಲಕ ತಾಲೂಕಿಗೆ ನೀರು ಹರಿಯದಿದ್ದರೆ ನೀರಿಗೆ ಹಾಹಾಕಾರ ಉಂಟಾಗುತ್ತದೆ. ಹಾಗಾಗಿ ಲಿಂಕ್ ಕೆನಾಲ್ ಯೋಜನೆ ಜಾರಿಗೆ ಸಿದ್ದರಾಮಯ್ಯ ಸರ್ಕಾರ 1000 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗೆ ಅನುವು ಮಾಡಿಕೊಟ್ಟಿದೆ. ಕಾಮಗಾರಿಗೆ ಬಿಜೆಪಿ ಹಾಗೂ ಜೆಡಿಎಸ್ನವರು ವಿರೋಧ ಮಾಡುತ್ತಿದ್ದಾರೆ. ಇದನ್ನು ತಾಲೂಕಿನ ರೈತರು ಪ್ರಶ್ನಿಸಬೇಕು. ನಮ್ಮ ತಾಲೂಕಿಗೆ ಹರಿಯಬೇಕಾದ ನೀರು ಪಡೆದುಕೊಂಡು, ಎಲ್ಲ ಹೋಬಳಿಯ ಭಾಗಗಳಿಗೂ ಸಮರ್ಪಕವಾಗಿ ಹರಿಯುವಂತೆ ಮಾಡಬೇಕು. ಆಗಲೇ ಇಲ್ಲಿನ ಶಾಶ್ವತ ನೀರಾವರಿ ಸಮಸ್ಯೆ ಬಗೆಹರಿಯಲಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ತುಮುಲ್ ನಿರ್ದೇಶಕ ಬೇಗೂರು ನಾರಾಯಣ್, ಮುಖಂಡರಾದ ಸುಂದರ ಕುಪ್ಪೆ ಪಾಪಣ್ಣ, ರಮೇಶ್ ಪುರಸಭೆ ಸದಸ್ಯ ದೇವರಾಜ್, ಮಾಜಿ ಸದಸ್ಯ ಪಾಪಣ್ಣ ಇದ್ದರು.