7 ರಂದು ಚಾಮರಾಜನಗರದಲ್ಲಿ ಪ್ರತಿಭಟನೆ

Published on

ಚಾಮರಾಜನಗರ : ಎಸ್‌ಸಿಪಿ, ಟಿಎಸ್ಪಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಸರ್ಕಾರ ನಡೆ ಖಂಡಿಸಿ ಆ.7 ರಂದು ಬಿಜೆಪಿ ವತಿಯಿಂದ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಪಕ್ಷದ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ ಕುಮಾರ್ ತಿಳಿಸಿದರು.

ನಗರದ ರಾಮಸಮುದ್ರ ಕುಲುಮೆ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಪಕ್ಷದ ಪದಾಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರಿಶಿಷ್ಟ ಸಮುದಾಯಗಳ ಕಲ್ಯಾಣಕ್ಕಾಗಿ ಬಜೆಟ್‌ನಲ್ಲಿ ಮೀಸಲಿಡುವ ಅನುದಾನವನ್ನು ಅನ್ಯ ಉದ್ದೇಶಿಗಳಿಗೆ ರಾಜ್ಯ ಸರ್ಕಾರ ಬಳಕೆ ಮಾಡುವ ಮೂಲಕ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಮೂಲಕ ಕಾನೂನು ಉಲ್ಲಂಘನೆ ಮಾಡುತ್ತಿದೆ. ಹಾಗಾಗಿ ಎಸ್ಸಿ-ಎಸ್ಟಿ ಸಮುದಾಯಗಳಿಗೆ ನ್ಯಾಯ ಕೊಡಿಸಲು ಬಿಜೆಪಿ ನಿರಂತರ ಹೋರಾಟ ಮಾಡಲಿದೆ. ಬಿಜೆಪಿ ಸರ್ಕಾರವಿದ್ದಾಗ ಎಲ್ಲ ನಿಗಮಗಳು ಸಮೃದ್ಧಿಯಾಗಿದ್ದವು. ವರ್ಷದಲ್ಲಿ ನೂರಾರು ಕೊಳವಿಬಾವಿ, ಸಾಲ ಸೌಲಭ್ಯ ನೀಡಲಾಗುತ್ತಿತ್ತು. ಆದರೀಗ ಅಂಬೇಡರ್, ವಾಲ್ಮೀಕಿ ನಿಗಮ ಸೇರಿದಂತೆ ಇತರ ನಿಗಮಗಳಿಗೆ 2, 3 ಗುರಿ ನೀಡಲಾಗಿದೆ. ಇದರಿಂದ ಈ ಸಮುದಾಯಗಳಿಗೆ ಕಾಂಗ್ರೆಸ್ ಸರ್ಕಾರ ಸವಲತ್ತುಗಳನ್ನು ನೀಡದೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.

ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ರಾಜ್ಯ ಸರ್ಕಾರ ಎಸ್‌ಸಿ, ಎಸ್ಟಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದು ಪ್ರತಿವರ್ಷವೂ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ. ಹಾಗಾಗಿ ಬೃಹತ್ ಮಟ್ಟದಲ್ಲಿ ಪ್ರತಿಭಟನೆಗೆ ರಾಜ್ಯ ಸಮಿತಿ ಆದೇಶ ಮಾಡಿದ್ದು, ಅದರಂತೆ. ಆ. 7 ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ಪಕ್ಷ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಾಜ್ಯ ಸರ್ಕಾರಕ್ಕೆ ಬಿಸಿಮುಟ್ಟಿಸುವ ಕೆಲಸ ಮಾಡಬೇಕಿದೆ. ಎಂದರು.

ಅಂದು ಶ್ರೀ ಚಾಮರಾಜೇಶ್ವರ ದೇಗುಲ ಮುಂಭಾಗ ಸಮಾವೇಶಗೊಂಡು ಅಲ್ಲಿಂದ ಮೆರವಣಗೆ ಹೊರಟು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಇನ್ನು ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಬಿ.ಶ್ರೀರಾಮುಲು, ಎಸ್‌ಸಿ ಮೋರ್ಚಾದ ರಾಜ್ಯಾಧ್ಯಕ್ಷ ಸಿಮೆಂಟ್ ಮಂಜು, ಎಸ್‌ಟಿ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಸೇರಿದಂತೆ ಇತರ ರಾಜ್ಯ ಮಟ್ಟದ ಮುಖಂಡರು ಭಾಗವಹಿಸಲಿದ್ದಾರೆ.

ಸಭೆಯಲ್ಲಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ.ಗೋಪಾಲಕೃಷ್ಣರಾಜ, ಪ್ರಧಾನ ಕಾರ್ಯದರ್ಶಿ ಮಹಾಂತೇಶ್, ಒಬಿಸಿ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ನೂರೊಂದು ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಸುಂದರ್, ನಗರ ಸಭಾಧ್ಯಕ್ಷ ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹಾದೇವಸ್ವಾಮಿ, ರಾಜ, ಎಸ್‌ಟಿ ಮೋರ್ಚಾ ಕಾರ್ಯದರ್ಶಿ ಜಯಸುಂದರ್, ಜಿಲ್ಲಾಧ್ಯಕ್ಷ ಚಂದ್ರಶೇಖರ, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮೂಡಳ್ಳಿಮೂರ್ತಿ, ಜಿಲ್ಲಾ ಮಹಿಳಾ ಮೋರ್ಚಾದ ಕಮಲಮ್ಮ ಜಿಲ್ಲಾ ಉಪಾಧ್ಯಕ್ಷ ವಿರಾಟ್, ಶಿವು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net