7 ತಿಂಗಳಲ್ಲಿ 100 ರೈತರಿಗೆ ಸಾಗುವಳಿ ಹಕ್ಕುಪತ್ರ ವಿತರಣೆ

HUN-DEC-9-1(SAGUVALI PATRA VITARANE)
ಹುಣಸೂರು ನಗರದ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಶಾಸಕ ಎಚ್.ಪಿ.ಮಂಜುನಾಥ್ ಅರ್ಜಿದಾರರಿಗೆ ಸಾಗುವಳಿ ಪತ್ರ ವಿತರಿಸಿದರು. ಸಮಿತಿ ಸದಸ್ಯರಾದ ನಾಗರಾಜ ಮಲ್ಲಾಡಿ, ವೆಂಕಟಮ್ಮ, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಇದ್ದರು.
Published on


ಹುಣಸೂರು: ಕಳೆದ 7 ತಿಂಗಳಲ್ಲಿ 100 ಅರ್ಜಿದಾರರಿಗೆ ಸಾಗುವಳಿ ಹಕ್ಕುಪತ್ರ ನೀಡುವ ಮೂಲಕ ರೈತಪರ ಕಾರ್ಯ ಕೈಗೊಂಡ ಸಾರ್ಥಕತೆ ನನ್ನದಾಗಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಸಂತಸ ವ್ಯಕ್ತಪಡಿಸಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಅಕ್ರಮ-ಸಕ್ರಮ ಸಮಿತಿ ವತಿಯಿಂದ 42 ಮಂದಿ ಅರ್ಜಿದಾರರಿಗೆ ಸಾಗುವಳಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

2 ವರ್ಷಗಳ ಹಿಂದೆ ಸರ್ಕಾರ ನೂತನವಾಗಿ ಅಕ್ರಮ-ಸಕ್ರಮ ಸಮಿತಿ ರಚಿಸಿದ್ದರೂ ಕೋವಿಡ್‌ನಿಂದಾಗಿ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ, ಕಳೆದ 7 ತಿಂಗಳ ಹಿಂದೆ ಸಮಿತಿ ಕ್ರಿಯಾಶೀಲವಾಗಿ ತಿಂಗಳಿಗೊಂದು ಸಭೆ ನಡೆಸಿದೆ. ಈವರೆಗೆ ಒಟ್ಟು 9 ಸಭೆಗಳನ್ನು ನಡೆಸಿ 100 ಅರ್ಜಿದಾರರಿಗೆ ಸಾಗುವಳಿ ಹಕ್ಕುಪತ್ರ ವಿತರಿಸಲಾಗಿದೆ. ರಾಜ್ಯದ ಯಾವುದೇ ತಾಲೂಕಿನಲ್ಲೂ ಆಗದ ಸಾಧನೆಯನ್ನು ನಮ್ಮ ತಾಲೂಕಿನಲ್ಲಿ ಮಾಡಲಾಗಿದೆ. ಸುಮಾರು 100 ಎಕರೆ ಭೂಮಿಯನ್ನು ಬಡ ರೈತರಿಗೆ ಸಮಿತಿಯ ಮೂಲಕ ವಿತರಿಸಲಾಗಿದೆ ಎಂದು ತಿಳಿಸಿದರು.
ಪಾರದರ್ಶಕವಾಗಿ ತೀರ್ಮಾನ:
ಸಮಿತಿಯಲ್ಲಿ ಸಮಾನ ಮನಸ್ಕ ಸದಸ್ಯರಾಗಿ ಹಿರಿಯ ದಲಿತ ಮುಖಂಡ ನಾಗರಾಜ ಮಲ್ಲಾಡಿ ಮತ್ತು ವೆಂಕಟಮ್ಮ ದುಡಿದಿದ್ದಾರೆ. ತಾಲೂಕು ಕಂದಾಯ ಇಲಾಖೆ ಕೂಡ ಅವಿತರವಾಗಿ ಶ್ರಮಿಸಿದೆ. ನಮೂನೆ 53 ಮತ್ತು 57ರಲ್ಲಿ ಸಲ್ಲಿಸಿದ ಅರ್ಜಿಗಳನ್ನು ಪಾರದರ್ಶಕವಾಗಿ ಕೂಲಂಕುಶವಾಗಿ ಪರಿಶೀಲಿಸಿ, ಯಾವುದೇ ಕಾನೂನಿನ ತೊಡಕುಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಮುಂದೆ ಪ್ರತಿ 15 ದಿನಕ್ಕೊಮ್ಮೆ ಸಭೆ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದರು.
ಸಮಿತಿ ಸದಸ್ಯ ನಾಗರಾಜ ಮಲ್ಲಾಡಿ, ಸದಸ್ಯೆ ವೆಂಕಟಮ್ಮ, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಉಪತಹಸೀಲ್ದಾರ್ ಶಕೀಲಬಾನು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net