

ತುಮಕೂರು: ಬೇಸಿಗೆ ಆರಂಭವಾದೊಡನೆ ರೈತರಿಗೆ ಬೆಳೆ ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಈ ಸಂದರ್ಭದಲ್ಲಿ ಕೊಳವೆಬಾವಿಗಳಿಗೆ ಸಮರ್ಪಕವಾಗಿ ತ್ರೀ ಪೇಸ್ ವಿದ್ಯುತ್ ನೀಡದ ಬೆಸ್ಕಾಂ ವಿರುದ್ಧ ರೈತರ ಆಕ್ರೋಶ ವ್ಯಕ್ತವಾಗಿದ್ದು, ಚೇಳೂರು ಎಂಎಂಎಸ್ ವ್ಯಾಪ್ತಿಯ ಗುಬ್ಬಿ ತಾಲೂಕು ಬೋರಗೊಂಡನಹಳ್ಳಿ ಮತ್ತು ಮಣ್ಣೆಮಾರಿ ಕಾವಲ್ ಭಾಗದ ರೈತರು ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ನೇತೃತ್ವದಲ್ಲಿ ರೈತರು, ಭಾರತೀಯ ಕಿಸಾನ್ ಸಂಘದ ಗ್ರಾಮ ಶಾಖೆಗಳ ಮುಖಂಡರು ಸೋಮವಾರ ನಗರದಲ್ಲಿ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಬಿ.ಎಲ್.ನರಸಿಂಹಮೂರ್ತಿ ಹಾಗೂ ಕಾರ್ಯಾಪಾಲಕ ಇಂಜಿನಿಯರ್ ಪ್ರಶಾಂತ ಕೂಡ್ಲಗಿ ಭೇಟಿಯಾಗಿ ವಿದ್ಯುತ್ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು. ಸರ್ಕಾರ ದಿನಕ್ಕೆ 7 ಗಂಟೆ ತೀಪೇಸ್ ವಿದ್ಯುತ್ ರೈತರಿಗೆ ನೀಡುವುದಾಗಿ ಘೋಷಿಸಿದೆ. ಆದರೆ, ಚೇಳೂರು ಎಂಎಸ್ಎಸ್ ನಿಂದ ಬೋರಗೊಂಡನಹಳ್ಳಿ ಮತ್ತು ಎಂಎಂಎ ಕಾವಲ್ ಪ್ರದೇಶದ ರೈತರ ಪಂಪ್ ಸೆಟ್ಗಳಿಗೆ ದಿನ ಬಿಟ್ಟು ದಿನ ಎರಡು ಗಂಟೆ ವಿದ್ಯುತ್ ನೀಡುತ್ತಿದೆ. ಇದರಿಂದ ರೈತರಿಗೆ ಸಾಕಷ್ಟು ತೊಂದರೆಯಾಗಿದೆ. ಬೆಳೆಗಳಿಗೆ ನೀರಿಲ್ಲದೆ ಸೊರಗುತ್ತಿವೆ. ಹಾಗಾಗಿ ಸರ್ಕಾರ ಭರವಸೆಯಂತೆ ದಿನಕ್ಕೆ 7 ಗಂಟೆ ವಿದ್ಯುತ್ ನೀಡಬೇಕು ಎಂಬುದು ಒತ್ತಾಯವಾಗಿದೆ ಎಂದರು.
ಚೇಳೂರು ಎಂ.ಎಂ.ಎಸ್ಗೆ ಬದಲಾಗಿ, ಸಿ.ನಂದಿಹಳ್ಳಿ ಬಳಿ ಹೊಸದಾಗಿ ಎಂಎಂಎಸ್ ನಿಮಾರ್ಣ ಮಾಡಲಾಗಿದೆ. ವಿದ್ಯುತ್ ಸರಬರಾಜಿಗೆ ಬೇಕಾದ ಎಲ್ಲ ರೀತಿಯ ಪರಿಕರಗಳನ್ನು ಒದಗಿಸಿದ್ದರೂ ಅಧಿಕಾರಿಗಳು ಚಾರ್ಜ್ ಮಾಡಿ ವಿದ್ಯುತ್ ಸರಬರಾಜು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಚೇಳೂರು ಎಂ.ಎಂ.ಎಸ್ನಿಂದ ಬೋರಗೊಂಡನಹಳ್ಳಿ ಮತ್ತು ಎಂ.ಎಂ.ಎ.ಕಾವಲ್ಗೆ ಸುಮಾರು 7 ಕಿಮೀ ಅದೇ ಸಿ.ನಂದಿಹಳ್ಳಿಯಿಂದ ಕೇವಲ 2 ಕಿಮೀ ಆಗಲಿದೆ. ಸಿ.ನಂದಿಹಳ್ಳಿ ಎಂ.ಎಂ.ಎಸ್ ಚಾರ್ಜ್ ಮಾಡುವುದರಿಂದ ಈ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಎ.ಎಲ್.ನರಸಿಂಹಮೂರ್ತಿ, ಬೋರಗೊಂಡನ ಹಳ್ಳಿ ಮತ್ತು ಎಂ.ಎಂ.ಎ.ಕಾವಲ್ ಭಾಗದಲ್ಲಿ ಅಸಮಪರ್ಕ ವಿದ್ಯುತ್ ಸರಬರಾಜಿನಿಂದ ತೊಂದರೆಯಾಗುತ್ತಿದೆ ಎಂದು ಮನವಿ ಸಲ್ಲಿಸಿದ್ದಾರೆ. ಅಲ್ಲದೆ ಸಮಸ್ಯೆ ಪರಿಹಾರಕ್ಕೆ ಅವರೇ ಕೆಲವು ಸಲಹೆ ನೀಡಿದ್ದಾರೆ. ಅವರ ಸಲಹೆಯಂತೆ ಈಗಾಗಲೇ ಸಂಬಂಧಪಟ್ಟ ಸೆಕ್ಷನ್ ಅಫೀಸರ್ ಜತೆಯೂ ಮಾತನಾಡಿದ್ದೇವೆ ಎಂದರು.
ಸಂಜೆ ವೇಳೆ ಫೀಕ್ ಅವರ್ನಲ್ಲಿಯೂ ಇರುವ ವಿದ್ಯುತ್ನಲ್ಲಿ ಈ ಭಾಗದ ರೈತರಿಗೂ ದಿನಕ್ಕೆ ಬೆಳಗಿನ ಹೊತ್ತು 3 ಗಂಟೆ, ರಾತ್ರಿ ವೇಳೆ 3 ಗಂಟೆ ತ್ರೀ ಪೇಸ್ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಲಾಗುವುದು. ಶೀಘ್ರದಲ್ಲಿಯೇ ಸಿ.ನಂದಿಹಳ್ಳಿ ಎಂ.ಎಂ.ಎಸ್ನ ಚಾರ್ಜ್ ಮಾಡಿ, ರೈತರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಇರಕಸಂದ್ರ ಗ್ರಾಪಂ ಸದಸ್ಯ ಜಯಣ್ಣ, ಭಾರತೀಯ ಕಿಸಾನ್ ಸಂಘದ ಗ್ರಾಮ ಸಮಿತಿ ಸದಸ್ಯ ಶೇಖರಪ್ಪ, ಪ್ರೇಮಕುಮಾರ್, ಮಂಜುನಾಥ್, ರೇಣುಕಾಸ್ವಾಮಿ, ಬಿ.ಎಸ್.ಆನಂದಪ್ಪ, ಬಿ.ಜೆ.ಪರಮೇಶ್, ನಿವೃತ್ತ ಶಿಕ್ಷಕ ಲಕ್ಷ$್ಮಯ್ಯ, ಶಿವರುದ್ರಯ್ಯ, ಮುಖಂಡರಾದ ರೇಣುಕಪ್ಪ, ಚಂದ್ರಯ್ಯಮಹದೇವಯ್ಯ, ರಮೇಶ್ ಮತ್ತಿತರರು ಇದ್ದರು.