

ಕೊಕಟನೂರ: ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಡುವ ಉಪ ಕೇಂದ್ರಗಳಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಸೇವೆ ಸಮರ್ಪಕವಾಗಿ ದೊರೆಯದ ಕಾರಣ ಗರ್ಭಿಣಿ, ಬಾಣಂತಿಯರು ಮತ್ತು ಶಿಶುಗಳಿಗೆ ಸರಿಯಾಗಿ ಚಿಕಿತ್ಸೆ ದೊರೆಯದೆ ತೊಂದರೆ ಅನುಭವಿಸುವಂತಾಗಿದೆ.
ಕೊಕಟನೂರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 12 ಗ್ರಾಮಗಳು, ಏಳು ಉಪ ಕೇಂದ್ರಗಳು ಒಳಪಡುತ್ತವೆ. 54 ಸಾವಿರ ಜನರ ತಮ್ಮ ಆರೋಗ್ಯ ಸೇವೆಗೆ ಈ ಕೇಂದ್ರಗಳನ್ನು ಅವಲಂಬಿಸಿದ್ದಾರೆ. ಆದರೆ, ಏಳು ಉಪ ಕೇಂದ್ರದಲ್ಲಿ ಕೇವಲ ಇಬ್ಬರು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಇದ್ದು, 12 ಗ್ರಾಮಗಳ ಜನರ ಆರೋಗ್ಯ ರಕ್ಷಣೆ ಇವರಿಗೆ ಕಷ್ಟವಾಗಿದೆ. ಸಕಾಲಕ್ಕೆ ಅಧಿಕಾರಿಗಳು ಹುದ್ದೆ ಭರ್ತಿಗೆ ಮುಂದಾಗದಿರುವುದು ಈ ಫಜೀತಿಗೆ ಪ್ರಮುಖ ಕಾರಣವಾಗಿದೆ. ಅಲ್ಲದೆ, ಸಿಬ್ಬಂದಿ ಕೊರತೆಯಿಂದ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರದ ಯೋಜನೆ ಅನುಷ್ಠಾನಕ್ಕೆ ಹಿನ್ನಡೆಯಾಗುತ್ತಿದೆ.
ಸದ್ಯ ಗ್ರಾಮೀಣ ಭಾಗದಲ್ಲೂ ಕರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಜನರಿಗೆ ಸೋಂಕು ನಿಯಂತ್ರಣ ಸಂಬಂಧ ಜಾಗೃತಿ ಮೂಡಿಸುವುದು ಸವಾಲಿನ ಕೆಲಸವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಹುದ್ದೆ ಭರ್ತಿಗೆ ಮುಂದಾಗಬೇಕು ಎನ್ನುವುದು ಪ್ರಜ್ಞಾವಂತರ ಆಗ್ರಹವಾಗಿದೆ.
ಅಥಣಿ ತಾಲೂಕಿನ ಎಲ್ಲ ಸರ್ಕಾರಿ ಆರೋಗ್ಯ ಹಾಗೂ ಉಪಕೇಂದ್ರದಲ್ಲಿ ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕರ ಕೊರತೆಯಿದೆ. ಈಗ ಗುತ್ತಿಗೆ ಆಧಾರದ ಮೇಲೆ ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಶೀಘ್ರಕಾಯಂ ಹುದ್ದೆ ಭರ್ತಿಗೆ ಕ್ರಮವಹಿಸಲಾಗುವುದು.| ಬಸನಗೌಡ ಕಾಗೆ ತಾಲೂಕು ವೈದ್ಯಾಧಿಕಾರಿ ಅಥಣಿ
| ಮೋಹನ ಪಾಟಣಕರ ಕೊಕಟನೂರ