ಬಿಹಾರ ಮೂಲದ 7 ಮಂದಿ ಅರೆಸ್ಟ್​

Published on

ಆನೇಕಲ್ : ಹಳೇ ಚಂದಾಪುರ ರೈಲ್ವೆ ಬ್ರಿಡ್ಜ್​ ಬಳಿ ನೀಲಿ ಬಣ್ಣದ ಸೂಟ್​ ಕೇಸ್​ನಲ್ಲಿ ಪತ್ತೆಯಾಗಿದ್ದ ಅಪರಿಚಿತ ಬಾಲಕಿಯ ಶವ ಪ್ರಕರಣ ಭೇದಿಸಿರುವ ಸೂರ್ಯನಗರ ಪೊಲೀಸರು, ಏಳು ಮಂದಿಯನ್ನು ಬಂಧಿಸಿದ್ದಾರೆ.

ಬಿಹಾರದ ನವಾದ ನಗರದವರಾದ ಆಶಿಕ್​ ಕುಮಾರ್​(42), ಮುಖೇಶ್​ ರಾಜವಂಶಿ(35), ಮುಖೇಶ್​ ಪತ್ನಿ ಇಂದುಮತಿ(32),ರಾಜಾರಾಮ್​ ಕುಮಾರ್​(18), ಕಾಲು ಕುಮಾರ್​(18), ಪಿಂಟು ಕುಮಾರ್​(19) ಹಾಗೂ ಇನ್ನೊಬ್ಬ ಬಾಲಾಪರಾಧಿ ಬಂಧಿತರು.

ಮೇ 21 ರಂದು ಬೆಂಗಳೂರು & ಹೊಸೂರು ರಾಷ್ಟ್ರೀಯ ಮುಖ್ಯ ಹೆದ್ದಾರಿಯ ಚಂದಾಪುರದ ರೈಲ್ವೆ ಸೇತುವೆ ಬಳಿ ನೀಲಿ ಬಣ್ಣದ ಸೂಟ್​ ಕೇಸ್​ನಲ್ಲಿ ಕೈ, ಕಾಲು ಮಡಚಿ ತುಂಬಿದ್ದ ಬಾಲಕಿಯ ಶವ ಪತ್ತೆಯಾಗಿತ್ತು. ಪ್ರಕರಣದ ಬೆನ್ನತ್ತಿದ ಸೂರ್ಯನಗರ ಪೊಲೀಸರು ಅಪರಿಚಿತ ಶವದ ವಾರಸುದಾರರ ಪತ್ತೆಗೆ ಪ್ರಕಟಣೆ ಹೊರಡಿಸಿ ಆರೋಪಿಗಳ ಬಂಧನಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಯುವತಿಯ ಚಹರೆ ಗಮನಿಸಿ ಉತ್ತರ ಭಾರತ ಮೂಲದ ಬಾಲಕಿಯಂತೆೆ ಮೇಲ್ನೋಟಕ್ಕೆ ಕಂಡು ಬಂದಿತ್ತು. ತನಿಖೆ ನಡೆಸಿದಾಗ ಬಾಲಕಿ ಬಿಹಾರದ ನವಾದ ಜಿಲ್ಲೆಯ ಬೆಲಾರು ಗ್ರಾಮದವಳು ಎಂಬುದು ಗೊತ್ತಾಗಿತ್ತು, ಮೇ 15ರಂದು ತವರೂರಿನಿಂದ ನಾಪತ್ತೆಯಾಗಿದ್ದಳು ಎಂಬ ಮಾಹಿತಿ ಕೂಡ ಸಿಕ್ಕಿತ್ತು.

ನಾಪತ್ತೆ ಪ್ರಕರಣ ದಾಖಲಿಸಿದ್ದ ತಂದೆ: ಬಾಲಕಿಯ ತಂದೆ ರವಿದಾಸ್​ ಹತ್ತಿರದ ಹಿಸ್ವ ಠಾಣೆಯಲ್ಲಿ ತನ್ನ 17 ವರ್ಷದ ಮಗಳು ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಿಸಿದ್ದರು.

ಹೆಂಡತಿ ಎಂದು ಯಾಮಾರಿಸಿದ್ದ: ಮೇ 15ರಂದು ಹುಡುಗಿಯನ್ನು ಪುಸಲಾಯಿಸಿ ಅಪಹರಿಸಿದ್ದ ಆರೋಪಿ ಆಶಿಕ್​ ಕುಮಾರ್​, 17ರಂದು ಆನೇಕಲ್​ ಬಳಿಯ ಕಾಚನಾಯಕನಹಳ್ಳಿಯ ಸ್ನೇಹಿತರೊಬ್ಬರ ಮನೆಗೆ ಕರೆತಂದಿದ್ದ, ತಾನು ಹೆಂಡತಿಯೊಂದಿಗೆ ಬಂದಿರುವೆ, ಎರಡು ಮೂರು ದಿನ ಇದ್ದು ಹೋಗುವೆ ಎಂದು ಬೇಡಿದ್ದರಿಂದ ಸ್ನೇಹಿತ ಮುಖೇಶ್​ ಇರಲು ಅವಕಾಶ ಮಾಡಿಕೊಟ್ಟಿದ್ದ. ಮೇ 20ರಂದು ಮುಖೇಶ್​ ಕೂಲಿ ಕೆಲಸಕ್ಕೆ ಹೋದಾಗ ಬೆಳಗ್ಗೆ 8 ರಿಂದ 9 ಗಂಟೆ ಒಳಗೆ ಲೈಂಗಿಕ ಹಲ್ಲೆ ಮಾಡಿ ಕತ್ತು ಹಿಸುಕಿ ಆಶಿಕ್​ ಕುಮಾರ್​ ಕೊಲೆ ಮಾಡಿದ್ದ ಎಂದು ತಿಳಿದು ಬಂದಿದೆ. ಕೊಲೆ ಬಳಿಕ ಆರೋಪಿಯು ತನ್ನ ಇತರ ಏಳು ಸ್ನೇಹಿತರನ್ನು ಕರೆತಂದು ಆತ್ಮಹತ್ಯೆ ಎಂದು ಬಿಂಬಿಸಿ ಸೂಟ್​ಕೇಸ್​ನಲ್ಲಿ ದೇಹವನ್ನು ತುಂಬಿ ರೈಲ್ವೆ ಹಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಬಳಿ ಇಟ್ಟು ಬಿಹಾರ ಸೇರಿಕೊಂಡಿದ್ದರು. ಜಾಡು ಹಿಡಿದ ಸೂರ್ಯನಗರ ಪೊಲೀಸರು, ಬಿಹಾರಕ್ಕೆ ತೆರಳಿ ಆರೋಪಿಗಳ ಹೆಡೆಮುರಿಕಟ್ಟಿ ಬಂಧಿಸಿದ್ದಾರೆ.

ಬಂಧಿತ ಪ್ರಮುಖ ಆರೋಪಿಯು ಈ ಹಿಂದೆ ಆನೇಕಲ್​ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಕಂಪನಿಯೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡಿದ್ದ. ಹೀಗಾಗಿ ಬಿಹಾರದ ಹುಡುಗಿಯ ಊರಿನಲ್ಲಿರುವ ನೆಂಟರಿಷ್ಟರ ಮನೆಗೆ ಹೋಗಿ ಆಕೆಗೆ ಬಲೆ ಬೀಸಿದ್ದು, ತನಗೆ ಎರಡು ಮಕ್ಕಳಿದ್ದರೂ ಹುಡುಗಿಯನ್ನು ಕರೆತಂದಿದ್ದ. ಆರೋಪಿಗೆ ಸಹಾಯ ಮಾಡಿದ್ದವರನ್ನು ಸಹ ಬಂಧಿಸಲಾಗಿದೆ. ಇನ್ನುಳಿದ ಇಬ್ಬರು ಆರೊಪಿಗಳಿಗಾಗಿ ಶೋಧ ನಡೆದಿದೆ. | ಸಿ.ಕೆ.ಬಾಬಾ ಬೆಂಗಳೂರು ಗ್ರಾಮಾಂತರ ಎಸ್​ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net