ನಕಲಿ ವೀಸಾ ಪಡೆದು ಇಂಗ್ಲೆಂಡ್​ಗೆ ಹೋಗಿ ಸಿಕ್ಕಿಬಿದ್ದರು; ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆ 7 ಜನರ ಬಂಧನ

arrest
Published on

ಬೆಂಗಳೂರು: ಕರೊನಾ ನಡುವೆ ನಕಲಿ ವೀಸಾ ಪಡೆದು ಇಂಗ್ಲೆಂಡ್​ಗೆ ಹೋಗಿದ್ದ ಕೇರಳದ ಏಳು ಮಂದಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಪೊಲೀಸರು ಬಂಧಿಸಿದ್ದಾರೆ. ಮೇ 14ರಂದು ಬ್ರಿಟಿಷ್​ ಏರ್​ವೇಸ್​​ನಲ್ಲಿ ಏಳು ಪ್ರಯಾಣಿಕರು ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಿದ್ದರು. ಆಗಮನ ದ್ವಾರದಲ್ಲಿ ವೀಸಾ ಪರಿಶೀಲನೆ ನಡೆಸಿದ ಯುಕೆ ವಿಮಾನ ನಿಲ್ದಾಣ ಸಿಬ್ಬಂದಿಗೆ ನಕಲಿ ಎಂಬುದು ಅನುಮಾನ ಬಂದಿದೆ. ತಕ್ಷಣ ನವದೆಹಲಿಯಲ್ಲಿ ಇರುವ ಬ್ರಿಟಿಷ್​​ ಹೈ ಕಮಿಷನ್​ ಕಚೇರಿಗೆ ಇ-ಮೇಲ್​ನಲ್ಲಿ ಎಲ್ಲ ವೀಸಾ ಕಳುಹಿಸಿ ಅಸಲಿತನದ ಬಗ್ಗೆ ಮಾಹಿತಿ ಕೋರಿದ್ದರು.

ಆ ಎಲ್ಲ ವೀಸಾ ಪರಿಶೀಲನೆ ನಡೆಸಿದ ಅಧಿಕಾರಿಗಳು ನಕಲಿ ಎಂಬುದು ಖಚಿತಪಡಿಸಿದ್ದಾರೆ. ತಕ್ಷಣ ಅಷ್ಟೂ ಪ್ರಯಾಣಿಕರನ್ನು ಕೆಐಎಗೆ ಯುಕೆ ಅಧಿಕಾರಿಗಳು ವಾಪಸ್​ ಕಳುಹಿಸಿದ್ದರು. ಕೆಐಎ ಇಮಿಗ್ರೇಷನ್​ ಅಧಿಕಾರಿಗಳು ಎಲ್ಲ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿ ಪ್ರತ್ಯೇಕ ದೂರು ನೀಡಿದ್ದಾರೆ.

ಇದರ ಅನ್ವಯ 7 ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಜಪ್ತಿ ಆಗಿರುವ ಅಷ್ಟೂ ವೀಸಾಗಳು ನೌಕರಿ ವೀಸಾ ಆಗಿವೆ. ಏಜೆಂಟ್​ಗಳಿಗೆ ಹಣ ಕೊಟ್ಟು ನಕಲಿ ವೀಸಾ ಪಡೆದಿದ್ದಾರೆ. ಆ ಏಜೆಂಟ್​ ಬಂಧನಕ್ಕೆ ಬಲೆ ಬೀಸಲಾಗಿದೆ. ಈ ಎಲ್ಲರೂ ಕೇರಳ ಮೂಲದವಾಗಿದ್ದಾರೆ ಎಂದು ಕೆಐಎ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net