

ಉಡುಪಿ: ಮುಂಬೈಯಿಂದ ಜಿಲ್ಲೆಗೆ ಆಗಮಿಸಿದ್ದ 7 ತಿಂಗಳ ಗರ್ಭಿಣಿಗೆ ಕರೊನಾ ಸೋಂಕು ದೃಢವಾಗಿದೆ. ಜಿಲ್ಲೆಯಲ್ಲಿ ಈ ಮೂಲಕ ಪತ್ತೆಯಾಗಿರುವ ಪಾಸಿಟಿವ್ ಪ್ರಕರಣಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಸೋಂಕಿತ 28 ವರ್ಷ ವಯಸ್ಸಿನ ಮಹಿಳೆಯು ಮಹಾರಾಷ್ಟ್ರದಿಂದ ಮೇ 13ರಂದು ಜಿಲ್ಲೆಗೆ ಆಗಮಿಸಿದ್ದು, ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಮಹಿಳೆ ಜತೆಗಿದ್ದ ಅವರ ಪತಿಯನ್ನು ಐಸೊಲೇಟೆಡ್ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ. ಇವರು ಬಂದಿದ್ದ ಬಸ್‌ನಲ್ಲಿ 25 ಮಂದಿ ಇದ್ದು ಎಲ್ಲರಿಗೂ ಕೋವಿಡ್-19 ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
230 ಮಾದರಿ ಸಂಗ್ರಹ: ಜಿಲ್ಲೆಯಲ್ಲಿ 21 ಮಂದಿಯ ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ. ಉಸಿರಾಟದ ತೊಂದರೆ 8, ಇಲ್‌ನೆಸ್‌ಗೆ ಸಂಬಂಧಿಸಿ 5 , ಕೋವಿಡ್-19 ಸಂಪರ್ಕ 2, ಹಾಟ್‌ಸ್ಪಾಟ್‌ನಿಂದ ಬಂದ 215 ಮಂದಿ ಸೇರಿದಂತೆ ಒಟ್ಟು 230 ಮಂದಿಯ ಮಾದರಿಯನ್ನು ಭಾನುವಾರ ಸಂಗ್ರಹಿಸಲಾಗಿದೆ.
16 ಮಂದಿ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇನ್ನೂ 341 ಮಂದಿಯ ವರದಿ ಬರಲು ಬಾಕಿ ಇದೆ. ಭಾನುವಾರ 85 ಮಂದಿ 28 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. ಐಸೊಲೇಶನ್ ವಾರ್ಡ್‌ನಿಂದ 7 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.