

ವಿಜಯವಾಣಿ ಸುದ್ದಿಜಾಲ ಆನೇಕಲ್
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಚಿರತೆ ಮರಿಗಳ ಸರಣಿ ಸಾವಿನಿಂದ ಸೂತಕದ ಛಾಯೆ ಆವರಿಸಿದೆ.
ಸಫಾರಿ ಹಾಗೂ ಮೃಗಾಲಯದಲ್ಲಿ ಆಗಸ್ಟ್ 22 ರಿಂದ ಸೆ.5ರವರೆಗೆ ಸುಮಾರು 7 ಮರಿಗಳು ಪೆಲಿನ್ ಪ್ಯಾನ್ಲೂಕೋಪೇನಿಯಾ ಎಂಬ ವೈರಸ್‌ನಿಂದ ಮೃತಪಟ್ಟಿವೆ. ಉದ್ಯಾನದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸಫಾರಿಯಲ್ಲಿ ಚಿರತೆ ಮರಿಯೊಂದಕ್ಕೆ ಆ.22ರಂದು ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಉಳಿದ ಸಫಾರಿ ಹಾಗೂ ಝೂನಲ್ಲಿನ ಮರಿಗಳಿಗೂ ರೋಗ ಕಾಣಿಸಿಕೊಂಡ ಹತ್ತೇ ದಿನದಲ್ಲಿ ಏಳು ಮರಿಗಳು ಮೃತಪಟ್ಟಿವೆ. ರೋಗ ಕಾಣಿಸಿಕೊಳ್ಳುತ್ತಿದ್ದಂತೆ ರಕ್ತ ವಾಂತಿ ಹಾಗೂ ಭೇದಿಯಾಗಿ ಮೃತಪಟ್ಟಿವೆ.
ಮರಿಗಳಿಗೆ ಒಂದು ವರ್ಷದವರೆಗೆ ಯಾವುದೇ ಲಸಿಕೆ ನೀಡುವುದಿಲ್ಲ. ಇದರಿಂದಾಗಿ ಈ ರೋಗ ಪ್ರಭಾವ ಬೀರಿದೆ. ಪ್ರತಿದಿನ ಮೃಗಾಲಯದಲ್ಲಿ ಪ್ರಾಣಿ ಸಾಕಣೆ ಮಾಡುವ ಅನಿಮಲ್ ಕೀಪರ್‌ಗಳ ಮನೆಗಳಲ್ಲಿ ಬೆಕ್ಕುಗಳಲ್ಲಿ ಸೋಂಕು ಕಂಡು ಬಂದಿದ್ದು, ಕ್ಷಮೇಣ ಮರಿಗಳಿಗೆ ತಗುಲಿದೆ ಎನ್ನಲಾಗಿದೆ.
ಸ್ವಚ್ಛತೆಗೆ ಆದ್ಯತೆ: ಚಿರತೆ ಮರಿಗಳು ಮಾರಕ ವೈರಸ್‌ಗೆ ಬಲಿಯಾಗುತ್ತಿದ್ದಂತೆ ಪ್ರಾಣಿ ಪಾಲಕರನ್ನೂ ಪ್ರತ್ಯೇಕವಾಗಿ ಇರುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಬ್ಬಾಳದ ಪಶು ವೈದ್ಯಕೀಯ ತಂಡ ಹಾಗೂ ವಿಜ್ಞಾನಿಗಳನ್ನು ಒಳಗೊಂಡ 11 ಜನ ತಜ್ಞರ ಸಮಿತಿ ರಚನೆ ಮಾಡಿ, ಚಿರತೆಗಳಿಗೆ ಬೂಸ್ಟರ್ ಡೋಸ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಚಿರತೆಗಳಿರುವ ಪ್ರದೇಶದ ಸುತ್ತಮುತ್ತ ವೈರಸ್ ಹರಡದಂತೆ ಬೆಂಕಿಯಿಂದ ಕೇಜ್‌ಗಳನ್ನು ಬರ್ನಿಂಗ್ ಮಾಡಿಸಿ, ಬ್ಲೀಚಿಂಗ್ ಪೌಡರ್ ಹಾಕಿ ಪಾರ್ಕಿನ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.