7 ಲಕ್ಷ ರೂ. ಮೌಲ್ಯದ ಅನ್ನಭಾಗ್ಯ ಅಕ್ಕಿ ಜಪ್ತಿ

010101
Published on

ಬೆಳಗಾವಿ: ಬೈಲಹೊಂಗಲ ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮದ ಕ್ರಾಸ್ ಬಳಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಣೆ ಮಾಡುತ್ತಿದ್ದ ಲಾರಿಯ ಮೇಲೆ ದಾಳಿ ನಡೆಸಿದ ಪೊಲೀಸರು, ಮೂವರನ್ನು ಬಂಧಿಸಿ 7.39 ಲಕ್ಷ ರೂ. ಮೌಲ್ಯದ ಅನ್ನಭಾಗ್ಯ ಅಕ್ಕಿ ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.

ಹುಬ್ಬಳ್ಳಿ ಪತೇಶಾ ನಗರದ ನಿವಾಸಿ ಜಮಾಲಖಾನ್ ಸತ್ತರಖಾನ್ ಪಠಾಣ (32), ದಿಲಾವರಖಾನ್ ಸತ್ತರಖಾನ್ ಪಠಾಣ (28), ಬಿಡನಾಳ ಗ್ರಾಮದ ಮಂಜುನಾಥ ವಿರೂಪಾಕ್ಷಪ್ಪ ಹರ್ಲಾಪುರ (36) ಬಂಧಿತರು.

ಸೋಮವಾರ ರಾತ್ರಿ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಆಧಾರದ ಮೇಲೆ ಬೈಲಹೊಂಗಲ-ಬೆಳಗಾವಿ ಮುಖ್ಯ ರಸ್ತೆಯ ಗದ್ದಿಕರವಿನಕೊಪ್ಪ ಕ್ರಾಸ್ ಬಳಿ ಲಾರಿಯ ಮೇಲೆ ದಾಳಿ ನಡೆಸಿದಾಗ 5 ಲಕ್ಷ ರೂ. ಮೌಲ್ಯದ ತಲಾ 50 ಕೆ.ಜಿ.ಯ 500 ಅನ್ನಭಾಗ್ಯ ಅಕ್ಕಿ ಚೀಲಗಳು ಮತ್ತು ಹಳೇ ಹುಬ್ಬಳ್ಳಿಯ ಬಂಕಾಪುರ ಚೌಕದಲ್ಲಿರುವ ಗೋದಾಮಿನಲ್ಲಿದ್ದ 2.39 ಲಕ್ಷ ರೂ. ಮೌಲ್ಯದ 50 ಕೆ.ಜಿ.ಯ 239 ಅಕ್ಕಿ ಚೀಲ ಸೇರಿದಂತೆ ಒಟ್ಟು 7.39 ಲಕ್ಷ ರೂ. ಮೌಲ್ಯದ ಅಕ್ಕಿ ಚೀಲ ಹಾಗೂ 8 ಲಕ್ಷ ರೂ. ಬೆಲೆಯ ಲಾರಿಯನ್ನು ಬೈಲಹೊಂಗಲ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೈಲಹೊಂಗಲ ಠಾಣೆ ಸಿಪಿಐ ಯು.ಎಚ್. ಸಾತೇನಹಳ್ಳಿ, ಪಿಎಸ್‌ಐ ಈರಪ್ಪ ಎಚ್.ರಿತ್ತಿ, ಸಿಬ್ಬಂದಿ ಡಿ.ವೈ.ನಾಯ್ಕರ್, ಯು.ಎಚ್.ಪೂಜೇರ, ಆಹಾರ ಇಲಾಖೆಯ ತಾಲೂಕು ನಿರೀಕ್ಷಕ ವೀರಭದ್ರ ನಿಂಗಪ್ಪ ಸೇಬನ್ನವರ ದಾಳಿ ನಡೆಸಿದ್ದರು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net