ಚಿರತೆ ದಾಳಿಗೆ 7 ಮೇಕೆಗಳು ಬಲಿ

09 NMG 01 (2)
Published on

ನಾಗಮಂಗಲ: ತಾಲೂಕಿನ ದೇವಲಾಪುರ ಹೋಬಳಿಯ ದಂಡಿಗನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಚಿರತೆ ದಾಳಿಗೆ ಸಿಲುಕಿ ಏಳು ಮೇಕೆಗಳು ಮೃತಪಟ್ಟಿವೆ.

ಗ್ರಾಮದ ರೈತ ಚಿಕ್ಕಯ್ಯ ಎಂಬುವರಿಗೆ ಸೇರಿದ ಏಳು ಮೇಕೆಗಳನ್ನು ಚಿರತೆ ಕಚ್ಚಿ ಕೊಂದುಹಾಕಿದ್ದು, 40 ಸಾವಿರ ರೂ.ಗಳಿಗೂ ಹೆಚ್ಚು ನಷ್ಟವುಂಟಾಗಿದೆ ಎಂದು ಅಂದಾಜಿಲಾಗಿದೆ.

ಮೇಕೆಗಳನ್ನು ಮನೆಯ ಪಕ್ಕದಲ್ಲಿರುವ ಕೊಟ್ಟಿಗೆಯಲ್ಲಿ ಎಂದಿನಂತೆ ಕೂಡಿಹಾಕಿದ್ದರು. ಇದನ್ನೇ ಹೊಂಚು ಹಾಕಿದ್ದ ಚಿರತೆ ಮಂಗಳವಾರ ರಾತ್ರಿ ಕೊಟ್ಟಿಗೆಗೆ ನುಗ್ಗಿ ಮೇಕೆಗಳ ಕುತ್ತಿಗೆ ಭಾಗಕ್ಕೆ ಕಚ್ಚಿ ಸಾಯಿಸಿದೆ.

ಒಂದು ವಾರದ ಹಿಂದೆ ಇದೇ ಗ್ರಾಮದ ರೈತರೊಬ್ಬರ ಎಮ್ಮೆಕರುವಿನ ಮೇಲೆ ದಾಳಿ ನಡೆಸಿದ್ದ ಚಿರತೆ ಗ್ರಾಮದ ಹೊರವಲಯಕ್ಕೆ ಎಳೆದೊಯ್ದು ತಿಂದುಹಾಕಿತ್ತು. ದಂಡಿಗನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಆಗಿಂದಾಗ್ಗೆ ಚಿರತೆ ಪ್ರತ್ಯಕ್ಷವಾಗುತ್ತಿದ್ದು, ಈ ವಿಚಾರವನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರೂ ಸಹ ಚಿರತೆಯನ್ನು ಸೆರೆಹಿಡಿಯುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ, ಚಿರತೆ ಮತ್ತೆ ದಾಳಿ ಮಾಡಿದೆ ಎಂದು ರೈತ ಚಿಕ್ಕಯ್ಯ ಆರೋಪಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ಗ್ರಾಮಸ್ಥರಿಂದ ಮಾಹಿತಿ ಪಡೆದು ಚಿರತೆಯನ್ನು ಶೀಘ್ರದಲ್ಲಿಯೇ ಸೆರೆಹಿಡಿಯುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net