

ಶಿರಸಿ: ಶಕ್ತಿ ಪೀಠ, ನಗರದ ಮಾರಿಕಾಂಬೆ ಸನ್ನಿಧಿಯಲ್ಲಿ ಶುಕ್ರವಾರ ಏಳು ಜೋಡಿಗಳು ಸತಿ- ಪತಿಗಳಾಗಿ ಹೊಸ ಜೀವನಕ್ಕೆ ಸಪ್ತಪದಿ ತುಳಿದರು. ದೇವಿಯ ಸನ್ನಿಧಿಯಲ್ಲಿ ಘಟ್ಟಿ ಮೇಳ ನುಡಿಸಲಾಯಿತು.
ಮಾರಿಕಾಂಬಾ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಸಪ್ತಪದಿ ಸರಳ ಸಾಮೂಹಿಕ ವಿವಾಹದಲ್ಲಿ ಮಾರಿಕಾಂಬಾ ದೇವಾಲಯದಿಂದಲೇ ವಧುವಿಗೆ ತಾಳಿ ಸರ, ಬಟ್ಟೆ, ವರನಿಗೆ ಬಟ್ಟೆ, ಖಣ ಇನ್ನಿತರ ವಸ್ತುಗಳನ್ನು ಪೂರೈಸಲಾಗಿತ್ತು.
ಈ ಸಮಯದಲ್ಲಿ ಶ್ರೀ ದೇವಸ್ಥಾನದ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ರವೀಂದ್ರ. ಜಿ. ನಾಯ್ಕ, ಉಪಾಧ್ಯಕ್ಷ ಸುದೇಶ. ಜಿ. ಜೋಗಳೇಕರ, ಧರ್ಮದರ್ಶಿಗಳಾದ ಸುಧೀರ್. ಎಸ್. ಹಂದ್ರಾಳ, ವತ್ಸಲಾ ಪಿ. ಹೆಗಡೆ ಮತ್ತು ಶಿವಾನಂದ ಪಿ. ಶೆಟ್ಟಿ ಮತ್ತು ಬಾಬುದಾರ ಮುಖ್ಯಸ್ಥರು ದೇವಾಲಯದ ಸಿಬ್ಬಂದಿ, ಅರ್ಚಕರು ಮತ್ತು ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಅಧಿಕಾರಿಗಳು, ಆರಕ್ಷಕ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಮಾರಿಕಾಂಬಾ ದೇವಸ್ಥಾನ ಕಳೆದ 30 ವರ್ಷಗಳಿಂದ ಸಪ್ತಪದಿ ಸರಳ ಸಾಮೂಹಿಕ ವಿವಾಹವನ್ನು ನಡೆಸಿಕೊಡುತ್ತಿದ್ದು, ರಾಜ್ಯದ ವಿವಿಧೆಡೆಯಿಂದ ಆಗಮಿಸಿ ಇಲ್ಲಿ ವಿವಾಹವಾಗುತ್ತಾರೆ. ಇಲ್ಲಿಯವರೆಗೆ ಒಟ್ಟೂ 142 ಜೋಡಿ ವಧು- ವರರು ವಿವಾಹವಾಗಿದ್ದಾರೆ.