ನೀರುಮಾರ್ಗ 7 ಜಾನುವಾರುಗಳು ಅನುಮಾನಾಸ್ಪದ ಸಾವು

crime
Published on

ಮಂಗಳೂರು: ನೀರುಮಾರ್ಗದ ಕೆಲರಾಯಿ ಚರ್ಚ್ ಬಳಿಯ ನಿವಾಸಿ ಹೈನುಗಾರರೊಬ್ಬರ ಮನೆಯಲ್ಲಿ ಏಳು ಜಾನುವಾರುಗಳು ಅನುಮಾನಾಸ್ಪದವಾಗಿ ಮೃತಪಟ್ಟ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೋಸೆಫ್ ಸ್ಟಾೃನಿ ಪ್ರಕಾಶ್ ಎಂಬವರ ಮನೆಯ 7 ದನಗಳು 10 ದಿನಗಳ ಅವಧಿಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದೆ. ದನಗಳಿಗೆ ಯಾರೋ ವಿಷ ಪದಾರ್ಥ ನೀಡಿ ಸಾಯಿಸಿರುವ ಬಗ್ಗೆ ಅನುಮಾನವಿದೆ. ಇದರಲ್ಲಿ ಕರು ಇರುವ ಹಾಲು ಕರೆಯುವ, ಗಬ್ಬದ ಹಸುಗಳು, ದೊಡ್ಡ ಮತ್ತು ಮಧ್ಯಮ ಗಾತ್ರದ ಎತ್ತುಗಳು ಸೇರಿವೆ.

ಸುಮಾರು 50 ವರ್ಷದಿಂದ ಹೈನುಗಾರಿಕೆ ನಡೆಸುತ್ತಿದ್ದು, 30ಕ್ಕೂ ಅಧಿಕ ಜಾನುವಾರುಗಳಿವೆ. ನಿತ್ಯ ನೀರುಮಾರ್ಗ- ಕೆಲರಾಯಿ ಕಡೆಗೆ ದನಗಳನ್ನು ಮೇಯಲು ಬಿಡುತ್ತೇವೆ. ಇದೇ ಮೊದಲ ಬಾರಿಗೆ ಈ ರೀತಿಯ ಘಟನೆ ನಡೆದಿದೆ. ಮೇಯಲು ಹೋದ ದನಗಳಿಗೆ ಯಾರೋ ವಿಷವುಣಿಸಿದ್ದಾರೆ. ಮನೆಗೆ ಬಂದ ಬಳಿಕ ಒಂದೊಂದೇ ಜಾನುವಾರುಗಳು ನಿತ್ರಾಣಗೊಂಡು ಬಿದ್ದು ಸಾವಿಗೀಡಾಗುತ್ತಿವೆ. ಕುತ್ತಿಗೆ ಬಳಿ ದಪ್ಪವಾಗಿರುವುದು ಕಂಡು ಬಂದಿದೆ ಎಂದು ಪ್ರಕಾಶ್ ದೂರಿನಲ್ಲಿ ತಿಳಿಸಿದ್ದಾರೆ.

ಜೂ.12ರಂದು ಒಂದು ದನ ಸಾವಿಗೀಡಾದರೆ, 13ರಂದು ಪಶುವೈದ್ಯರು ಬಂದು ರಕ್ತದ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ. ಆರು ದನಗಳು ಮನೆಯಲ್ಲಿಯೇ ಸಾವಿಗೀಡಾಗಿದ್ದು, ಒಂದು ದನ ಮೇಯಲು ಬಿಟ್ಟಲ್ಲಿ ಗುಡ್ಡದಲ್ಲಿಯೇ ಮೃತಪಟ್ಟಿದೆ. ಇನ್ನು ಒಂದು ಜೀವನ್ಮರಣ ಸ್ಥಿತಿಯಲ್ಲಿದೆ. ಸ್ಥಳೀಯವಾಗಿ ಇನ್ನೂ ಕೆಲವರು ದನಗಳನ್ನು ಮೇಯಲು ಬಿಡುತ್ತಿದ್ದಾರೆ. ಆದರೆ ಅವರ ದನಗಳಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net