24 ಗಂಟೆಯಲ್ಲಿ ಕಾರ್ತಿಕ ಕೊಲೆ ಪ್ರಕರಣದ 7 ಆರೋಪಿಗಳ ಸೆರೆ

Published on

ಮೈಸೂರು: ಕ್ಯಾತಮಾರನಹಳ್ಳಿಯ ರೌಡಿಶೀಟರ್ ಕಾರ್ತಿಕ್ ಕೊಲೆಯ ಸಂಬಂಧ ಒಬ್ಬ ಮಹಿಳೆ ಸೇರಿದಂತೆ 7 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ತಿಳಿಸಿದ್ದಾರೆ.

ಮೇ 5 ಬೆಳಗಿನ ಜಾವ ವರುಣ ಪೊಲೀಸ್ ಠಾಣೆಯ ವ್ಯಾಪ್ತಿಯ ಹೋಟೆಲ್‌ವೊಂದರ ಆವರಣದಲ್ಲಿ ಕಾರ್ತಿಕ್‌ನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಕೊಲೆ ನಡೆದ 24 ಗಂಟೆಯೊಳಗೆ ಏಳು ಜನರನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ. ಕೊಲೆಯಾದ ಕಾರ್ತಿಕ್ ವಿರುದ್ಧವೂ ಉದಯಗಿರಿ ಹಾಗೂ ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದೊಂದು ಕೇಸ್ ಇದ್ದು, ರೌಡಿಶೀಟರ್ ಪ್ರಕರಣವೂ ದಾಖಲಾಗಿದೆ ಎಂದು ಹೇಳಿದರು.

ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಪತ್ತೆಗೆ 3 ತಂಡ ರಚನೆ ಮಾಡಲಾಗಿತ್ತು. ಸ್ಥಳದಲ್ಲಿ ಹಾಗೂ ಬೇರೆ, ಬೇರೆ ಎರಡು ಮೂರು ಕಡೆ ಸಿಸಿ ಟಿವಿ, ಭಾತ್ಮೀದಾರರ ಮಾಹಿತಿ ಮೇರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರವೀಣ್, ಅವಿನಾಶ್, ರವಿ, ಚಂದ್ರು, ಆನಂದ, ವೆಂಕಟೇಶ್ ಶೆಟ್ಟಿ ಹಾಗೂ ಮಹಿಳೆ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ ಎಂದು ತಿಳಿಸಿದರು.

ಮಹಿಳೆ ವಿಚಾರವಾಗಿ ಕೊಲೆ: ಪ್ರಾಥಮಿಕ ತನಿಖೆಯಿಂದ ಹಣದ ವಿಚಾರಕ್ಕೆ ಕೊಲೆ ನಡೆದಿದೆ ಎಂಬುದು ತಿಳಿದುಬಂತು. ನಂತರ ವಿಚಾರಣೆಯ ವೇಳೆ ಒಬ್ಬ ಮಹಿಳೆ ವಿಚಾರವಾಗಿ ಕೊಲೆ ನಡೆದಿದೆ ಎಂಬುದು ಗೊತ್ತಾಗಿದೆ. ಮೃತ ಕಾರ್ತಿಕ್ ಹಾಗೂ ಆತನ ಕಾರು ಚಾಲಕನಾಗಿದ್ದ ಪ್ರವೀಣ್ ಹುಡುಗಿಯ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದರು. ಹೀಗಾಗಿ ಆತನನ್ನು ಕೊಲೆ ಮಾಡಲು ಪ್ರವೀಣ್ ಸಂಚು ರೂಪಿಸಿ ತಂಡ ಕಟ್ಟಿಕೊಂಡಿದ್ದು, ಇದಕ್ಕೆ ಮಹಿಳೆಯೂ ಸಹಕಾರ ನೀಡಿರುವುದಾಗಿ ತಿಳಿದುಬಂದಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net