7-8 ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ

ಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ, ಆಳ್ವಾಸ್ ಸ್ವಾಯತ್ತ ಕಾಲೇಜು ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರಸಾದ ಶೆಟ್ಟಿ, ಪ್ಲೇಸ್‌ಮೆಂಟ್ ವಿಭಾಗ ಮುಖ್ಯಸ್ಥೆ ರಂಜಿತಾ ಆಚಾರ್ಯ ಉಪಸ್ಥಿತರಿದ್ದರು.
ಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ, ಆಳ್ವಾಸ್ ಸ್ವಾಯತ್ತ ಕಾಲೇಜು ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರಸಾದ ಶೆಟ್ಟಿ, ಪ್ಲೇಸ್‌ಮೆಂಟ್ ವಿಭಾಗ ಮುಖ್ಯಸ್ಥೆ ರಂಜಿತಾ ಆಚಾರ್ಯ ಉಪಸ್ಥಿತರಿದ್ದರು.
Published on
ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ 16ನೇ ಆವೃತ್ತಿಯ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ ಆಗಸ್ಟ್ 7 ಮತ್ತು 8ರಂದು ಮೂಡುಬಿದಿರೆಯ ಆಳ್ವಾಸ್‌ನ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದೆ. ಈ ವರ್ಷದ ಆಳ್ವಾಸ್ ಪ್ರಗತಿಯಲ್ಲಿ 24,298ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ತಿಳಿಸಿದರು.
ಉದ್ಯೋಗ ಮೇಳವು ಅಭ್ಯರ್ಥಿಗಳು ಹಾಗೂ ಉದ್ಯೋಗದಾತರಿಗೆ ಸಂಪೂರ್ಣ ಉಚಿತ. ಗ್ರಾಮೀಣ ಭಾಗದ ಹಾಗೂ ಅವಕಾಶವಂಚಿತ ಪ್ರತಿಭಾವಂತ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶವನ್ನು ಈ ಮೇಳ ನಡೆಸಲಾಗುತ್ತಿದೆ. ಇಲ್ಲಿಯವರೆಗೆ ಆಳ್ವಾಸ್ ಆಯೋಜಿಸಿದ ಒಟ್ಟು 23 ಉದ್ಯೋಗ ಮೇಳಗಳ ಮೂಲಕ 40,848 ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಉದ್ಯೋಗ ದೊರಕಿದ್ದರೆ, 66,432 ಅಭ್ಯರ್ಥಿಗಳು ವಿವಿಧ ಕಂಪನಿಗಳಲ್ಲಿ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಪ್ರಮುಖ ವಿಶೇಷತೆ
ಐಟಿ, ಐಟಿಇಎಸ್, ಉತ್ಪಾದನೆ, ಆರೋಗ್ಯ ಮತ್ತು ಔಷಧ, ಬ್ಯಾಂಕಿಂಗ್ ಮತ್ತು ಹಣಕಾಸು, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಶಿಕ್ಷಣ, ಮಾಧ್ಯಮ, ಆತಿಥ್ಯ, ಎಲೆಕ್ಟ್ರಾನಿಕ್ಸ್ ಹಾಗೂ ದೂರಸಂಪರ್ಕ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿವೆ. ಇದುವರೆಗೆ 326 ಕಂಪನಿಗಳು ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಂಡಿದ್ದು, ಈ ಬಾರಿ 350ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಉದ್ಯೋಗ ಮೇಳದ ಕುರಿತು ಸಮಗ್ರ ಮಾಹಿತಿ ಹಾಗೂ ಸಂದರ್ಶನಕ್ಕೆ ಬೇಕಾದ ಅಗತ್ಯ ಸಿದ್ಧತೆಗಾಗಿ ಬಂಟ್ವಾಳ, ಪುತ್ತೂರು, ಕುಂದಾಪುರ, ಸುಬ್ರಹ್ಮಣ್ಯ, ಮೂಡುಬಿದಿರೆ, ಮಂಗಳೂರು, ಕಾಪು ಮತ್ತು ಉಪ್ಪಳದಲ್ಲಿ ಆಳ್ವಾಸ್‌ನ ತಜ್ಞರ ತಂಡದಿಂದ ಉಚಿತ ಓರಿಯಂಟೇಶನ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಅನುಕೂಲಕರ ಕೇಂದ್ರದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
2026ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ ಪೂರ್ಣಗೊಳಿಸಿದವರು ಹಾಗೂ ಅದಕ್ಕೂ ಹಿಂದಿನ ವರ್ಷಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿರುವ ಅಭ್ಯರ್ಥಿಗಳೂ ಭಾಗವಹಿಸಲು ಅರ್ಹರಾಗಿರುತ್ತಾರೆ. ಅನುಭವ ಹೊಂದಿರುವ ಅಭ್ಯರ್ಥಿಗಳಿಗೂ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಿವೆ.
ಉದ್ಯೋಗ ಮೇಳದಲ್ಲಿ ವಿಶೇಷ ಎಐ ಆಧಾರಿತ ಚಾಟ್‌ಬಾಟ್ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಅಭ್ಯರ್ಥಿಗಳು ತಮ್ಮ ಬಯೋಡೇಟಾವನ್ನು ಅಪ್‌ಲೋಡ್ ಮಾಡಿದ ತಕ್ಷಣ ಅವರ ವಿದ್ಯಾರ್ಹತೆ ಹಾಗೂ ಅರ್ಹತೆಗೆ ಅನುಗುಣವಾದ ಕಂಪನಿಗಳು ಮತ್ತು ಉದ್ಯೋಗಾವಕಾಶಗಳನ್ನು ಗುರುತಿಸಿ ಶಿಫಾರಸು ಮಾಡುವ ವ್ಯವಸ್ಥೆ ಇರಲಿದೆ ಎಂದು ವಿವರಿಸಿದರು.
ಎಕ್ಸ್‌ಪರ್ಟೈಸ್ ಸಂಸ್ಥೆಯು ಡಿಪ್ಲೊಮಾ ಹಾಗೂ ಐಟಿಐ ಅಭ್ಯರ್ಥಿಗಳಿಗಾಗಿ ಗಲ್ಫ್ ರಾಷ್ಟ್ರಗಳ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ. ಎಂಬಿಎ, ಎಂಎಚ್‌ಆರ್‌ಡಿ, ಎಂಎಸ್‌ಡಬ್ಲ್ಯು ಮತ್ತು ಬಿಎಸ್‌ಡಬ್ಲ್ಯು ಅಭ್ಯರ್ಥಿಗಳಿಗಾಗಿ 70ಕ್ಕೂ ಹೆಚ್ಚು ಮಾನವ ಸಂಪನ್ಮೂಲ ಹುದ್ದೆಗಳು ಲಭ್ಯವಿವೆ. ಉತ್ಪಾದನಾ ಕ್ಷೇತ್ರದಲ್ಲಿ 74 ಕಂಪನಿಗಳು ಭಾಗವಹಿಸುತ್ತಿದ್ದು, 5,877ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸುತ್ತಿವೆ.
ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ (ಕೋಲಾರ) ಮಹಿಳಾ ಅಭ್ಯರ್ಥಿಗಳಿಗಾಗಿ ವಿಶೇಷ ನೇಮಕಾತಿ ಅಭಿಯಾನ ನಡೆಸುತ್ತಿದೆ. ಐಟಿ/ಐಟಿಇಎಸ್ ಕ್ಷೇತ್ರದಲ್ಲಿ 35 ಕಂಪನಿಗಳಿಂದ 200ಕ್ಕೂ ಹೆಚ್ಚು ಕೋರ್ ಐಟಿ ಹಾಗೂ 3,500ಕ್ಕೂ ಹೆಚ್ಚು ನಾನ್-ಐಟಿ ಉದ್ಯೋಗಾವಕಾಶಗಳು ಲಭ್ಯವಿವೆ. ಎಎನ್‌ಝಡ್, ಇಎಕ್ಸ್‌ಎಲ್, ಆಕ್ಸಿಸ್ ಬ್ಯಾಂಕ್, ಉಜ್ಜೀವನ್ ಸ್ಮಾಲ್ -ನಾನ್ಸ್ ಬ್ಯಾಂಕ್ ಸೇರಿದಂತೆ 30ಕ್ಕೂ ಹೆಚ್ಚು ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳು ವಾಣಿಜ್ಯ ವಿಭಾಗದ ಪದವಿ ಹಾಗೂ ಸ್ನಾತಕೋತ್ತರ ಅಭ್ಯರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುತ್ತಿವೆ. ವೊಕಾರ್ಟ್ ಆಸ್ಪತ್ರೆ, ಸಕ್ರಾ ವರ್ಲ್ಡ್ ಆಸ್ಪತ್ರೆ ಸೇರಿದಂತೆ ಪ್ರಮುಖ ಆಸ್ಪತ್ರೆಗಳು ಮುಂಬೈನಲ್ಲಿ ಆರೋಗ್ಯ ಕ್ಷೇತ್ರದ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಸಲಿವೆ. ಮಹೀಂದ್ರ -ನಾನ್ಸ್ ಸಂಸ್ಥೆಯು ಏರಿಯಾ ಬಿಸಿನೆಸ್ ಮ್ಯಾನೇಜರ್ ಹುದ್ದೆಗೆ ವಾರ್ಷಿಕ 8 ಲಕ್ಷ ರೂ.ವರೆಗಿನ ವೇತನ ನೀಡುತ್ತಿದೆ. ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ 5 ಲಕ್ಷ ರೂ.ವರೆಗಿನ ವಾರ್ಷಿಕ ವೇತನದ ಉದ್ಯೋಗಾವಕಾಶಗಳು ಲಭ್ಯವಿವೆ. ಮಾರಾಟ ಕ್ಷೇತ್ರದಲ್ಲಿ ಕೋಡ್‌ಯಂಗ್ ಸಂಸ್ಥೆಯು ಪದವಿ ಹಾಗೂ ಸ್ನಾತಕೋತ್ತರ ಅಭ್ಯರ್ಥಿಗಳಿಗೆ 8 ಲಕ್ಷ ರೂ.ವರೆಗಿನ ವಾರ್ಷಿಕ ವೇತನದ ಉದ್ಯೋಗಾವಕಾಶಗಳನ್ನು ನೀಡುತ್ತಿದೆ ಎಂದು ವಿವೇಕ ಆಳ್ವ ಮಾಹಿತಿ ನೀಡಿದರು.
ವಲಯವಾರು ವಿಶೇಷತೆಗಳು
ಉತ್ಪಾದನಾ ಕ್ಷೇತ್ರದ 74 ಪ್ರಮುಖ ಕಂಪನಿಗಳು ಆಳ್ವಾಸ್ ಪ್ರಗತಿ 2026ರಲ್ಲಿ ಭಾಗವಹಿಸುತ್ತಿವೆ. ಈ ಕ್ಷೇತ್ರದಲ್ಲಿ ವಿವಿಧ ವಿದ್ಯಾರ್ಹತೆಗಳಿಗೆ ಒಟ್ಟು 5,877 ಉದ್ಯೋಗಾವಕಾಶಗಳು ಲಭ್ಯವಿವೆ. ಐಟಿ / ಐಟಿಇಎಸ್ ಕ್ಷೇತ್ರದಲ್ಲಿ 200ಕ್ಕೂ ಹೆಚ್ಚು ಕೋರ್ ಐಟಿ ಹಾಗೂ 3,500ಕ್ಕೂ ಹೆಚ್ಚು ನಾನ್-ಐಟಿ ಉದ್ಯೋಗಾವಕಾಶಗಳು ಲಭ್ಯವಿವೆ.
ಬ್ಯಾಂಕಿಂಗ್, ಹಣಕಾಸು ಮತ್ತು ವಿಮಾ ಕ್ಷೇತ್ರದ 30 ಪ್ರಮುಖ ಕಂಪನಿಗಳು ಭಾಗವಹಿಸುತ್ತಿದ್ದು, 2,450ಕ್ಕೂ ಹೆಚ್ಚು ಉದ್ಯೋಗವಕಾಶಗಳು ಲಭ್ಯವಿವೆ. ಆರೋಗ್ಯ ವಲಯದ 25 ಪ್ರಮುಖ ಆಸ್ಪತ್ರೆಗಳು ಹಾಗೂ ಆರೋಗ್ಯ ಸಂಸ್ಥೆಗಳು ಭಾಗವಹಿಸುತ್ತಿದ್ದು, 1,700ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ. ನಿರ್ಮಾಣ ವಲಯದ 13 ಪ್ರಮುಖ ಕಂಪನಿಗಳು ಭಾಗವಹಿಸುತ್ತಿವೆ. ಚಿಲ್ಲರೆ ವ್ಯಾಪಾರ ಮತ್ತು ಮಾರಾಟ ವಲಯದ 67 ಪ್ರಮುಖ ಚಿಲ್ಲರೆ ವ್ಯಾಪಾರ ಮತ್ತು ಮಾರಾಟ ಕ್ಷೇತ್ರದ ಕಂಪನಿಗಳು ಭಾಗವಹಿಸುತ್ತಿವೆ. ಈ ಕ್ಷೇತ್ರದಲ್ಲಿ 4,500ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ. ಶಿಕ್ಷಣ ಮತ್ತು ಸ್ವಯಂಸೇವಾ ಸಂಸ್ಥೆಗಳ 11 ಪ್ರಮುಖ ಶಿಕ್ಷಣ ಮತ್ತು ಸ್ವಯಂಸೇವಾ ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ. ಆತಿಥ್ಯ ವಲಯದ 19 ಪ್ರಮುಖ ಆತಿಥ್ಯ ಕ್ಷೇತ್ರದ ಕಂಪನಿಗಳು ಭಾಗವಹಿಸುತ್ತಿವೆ. ಈ ವಲಯದಲ್ಲಿ 285ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ. 12 ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ 145ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ. ಔಷಧ ತಯಾರಿಕಾ ವಲಯದ 7 ಪ್ರಮುಖ ಕಂಪನಿಗಳು ಆಳ್ವಾಸ್ ಭಾಗವಹಿಸುತ್ತಿವೆ. ದೂರಸಂಪರ್ಕ ವಲಯ 6 ಪ್ರಮುಖ ಕಂಪನಿಗಳು ಭಾಗವಹಿಸುತ್ತಿವೆ ಎಂದು ಅವರು ವಿವರ ನೀಡಿದರು.
ಆಳ್ವಾಸ್ ಸ್ವಾಯತ್ತ ಕಾಲೇಜು ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರಸಾದ ಶೆಟ್ಟಿ, ಪ್ಲೇಸ್‌ಮೆಂಟ್ ವಿಭಾಗ ಮುಖ್ಯಸ್ಥೆ ರಂಜಿತಾ ಆಚಾರ್ಯ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net