

ಹಾಸನ: ಮನೆಯ ಡೋರ್‌ಲಾಕ್ ಮುರಿದು ರೂಮಿನ ಬೀರುವಿನಲ್ಲಿದ್ದ 7.68 ಲಕ್ಷ ರೂ.ಬೆಲೆಯ ಚಿನ್ನಾಭರಣ ಹಾಗೂ 70 ಸಾವಿರ ನಗದು ಕಳವು ಮಾಡಿರುವ ಘಟನೆ ತಾಲೂಕಿನ ಸಾವಂತನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಎಸ್.ವಿ. ಶರತ್ ಎಂಬುವರು ಹಾಸನದಲ್ಲಿ ಡ್ರೈವಿಂಗ್ ಶಾಲೆ ನಡೆಸುತ್ತಿದ್ದು, ನ.19ರಂದು ಬೆಳಿಗ್ಗೆ 9.30 ಗಂಟೆಯಲ್ಲಿ ಹಾಸನಕ್ಕೆ ಹೋಗಿದ್ದರು. ತಂದೆ ವೀರಭದ್ರೇಗೌಡ ಅವರೂ ಸಹ ಗೂಡ್ಸ್ ಆಟೋ ಚಾಲನೆ ಮಾಡಿಕೊಂಡು ಹೋಗಿದ್ದರು. ತಾಯಿ ಚಂದ್ರಕಲಾ ಸಂಬಂಧಿಕರ ಬೀಗರ ಔತಣ ಇದ್ದುದರಿಂದ ಮಧ್ಯಾಹ್ನ 2 ಗಂಟೆಯಲ್ಲಿ ಮನೆಗೆ ಬೀಗ ಹಾಕಿಕೊಂಡು ಬೀಗದ ಕೀಯನ್ನು ಕಿಟಕಿ ಹತ್ತಿರ ಇಟ್ಟು ಪುರದಮ್ಮ ದೇವಸ್ಥಾನಕ್ಕೆ ಹೋಗಿದ್ದರು. ವಾಪಸ್ ಸಂಜೆ 5.30 ಗಂಟೆಗೆ ಮನೆಗೆ ಬಂದು ಮನೆಯ ಬೀಗದ ಕೀ ತೆಗೆದು ಒಳಗೆ ಹೋಗಿ ನೋಡಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.
ಮನೆಯ ರೂಮಿನ ವಾರ್ಡ್‌ರೂಬ್ ಮುರಿದು ಬೀರುವಿನಲ್ಲಿದ್ದ 60 ಗ್ರಾಂ.ತೂಕದ 2 ಎಳೆ ಚಿನ್ನದ ಸರ, 30 ಗ್ರಾಂ.ನ 3 ಚಿನ್ನದ ಉಂಗುರ, 25 ಗ್ರಾಂ.ನ ಚಿನ್ನದ ಕೈ ಚೈನು, 44 ಗ್ರಾಂ. ತೂಕದ ಚಿನ್ನದ ನೆಕ್ಲೇಸ್, 32 ಗ್ರಾಂ ತೂಕದ 3 ಜೊತೆ ಕಿವಿಯ ಓಲೆ, 1 ಗ್ರಾಂ ನ ಚಿನ್ನದ ಮೂಗುನತ್ತು ಹಾಗೂ ಬೀರುವಿನಲ್ಲಿದ್ದ 70 ಸಾವಿರ ನಗದನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಶರತ್.ಎಸ್.ವಿ ಅವರು ನೀಡಿದ ದೂರಿನ ಮೇರೆಗೆ ಶಾಂತಿಗ್ರಾಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.