

ಶಿವಮೊಗ್ಗ: ಕುಡಿಯುವ ನೀರಿನ ಕಾಮಗಾರಿ ಕಾರ್ಮಿಕರಿಗೆ ವೇತನ ಕೊಡಲು ತಂದಿದ್ದ 20 ಲಕ್ಷ ರೂ. ಇದ್ದ ಬ್ಯಾಗ್ ಕದ್ದು ಗೋವಾದ ಕ್ಯಾಸಿನೋಗೆ ತೆರಳಿದ್ದ ಕಾರು ಚಾಲಕನಿಂದ ತುಂಗಾನಗರ ಠಾಣೆ ಪೊಲೀಸರು 7.61 ಲಕ್ಷ ರೂ. ನಗದು ಜಪ್ತಿ ಮಾಡಿದ್ದಾರೆ.
ಶಿರಾಳಕೊಪ್ಪ ನೆಹರೂ ಕಾಲನಿ 3ನೇ ಕ್ರಾಸ್‌ನ ಎ.ಎಸ್.ನಿತೀಶ್ ಬಂಧಿತ ಆರೋಪಿಯಾಗಿದ್ದು ಆತನನ್ನು ಗೋವಾದ ಕ್ಯಾಸಿನೋದಲ್ಲೇ ಬಂಧಿಸಿ ಕರೆತಂದಿದ್ದಾರೆ.
ನಿತೀಶ್ ನಗರದಲ್ಲಿ ನಡೆಯುತ್ತಿರುವ 24*7 ಕುಡಿಯುವ ನೀರು ಸರಬರಾಜಿನ ಯೋಜನಾ ವ್ಯವಸ್ಥಾಪಕ ಹೇಮಂತ್ ಕುಮಾರ್ ಅವರ ಕಾರಿನ ಚಾಲಕನಾಗಿದ್ದ. ಕಳೆದ ಜು.29ರಂದು ಜ್ಯೋತಿನಗರದ ಬಳಿ ಹಣವಿದ್ದ ಬ್ಯಾಗ್ ಕಿತ್ತುಕೊಂಡು ಹೋಗಿದ್ದ. ಈ ಬಗ್ಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೂಜಾಟದ ಕೀಳು ಬೆಳೆಸಿಕೊಂಡಿದ್ದ ನಿತೀಶ್ 20 ಲಕ್ಷ ರೂ.ನಲ್ಲಿ 12.39 ಲಕ್ಷ ರೂ. ಅನ್ನು ಕ್ಯಾಸಿನೋದಲ್ಲಿ ಜೂಜಾಡಿ ಕಳೆದಿದ್ದಾನೆ ಎನ್ನಲಾಗಿದೆ.
ಡಿವೈಎಸ್ಪಿ ಬಾಲರಾಜ್ ಮೇಲ್ವಿಚಾರಣೆಯಲ್ಲಿ ತುಂಗಾನಗರ ಠಾಣೆ ಇನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ಪಿಎಸ್‌ಐಗಳಾದ ಕುಮಾರ್ ಕುರಗುಂದ, ಎಂ.ರಘುವೀರ, ಎಎಸ್‌ಐ ಮನೋಹರ್ ಹಾಗೂ ಸಿಬ್ಬಂದಿಗಳಾದ ಕಿರಣ್ ಮೋರೆ, ಅರುಣ್‌ಕುಮಾರ, ಮೋಹನ್‌ಕುಮಾರ್, ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ಲಂಕೇಶ್‌ಕುಮಾರ್, ಕಾಂತರಾಜ್, ಅರಿಹಂತ ಶಿರಹಟ್ಟಿ, ಹರೀಶ್ ಅವರನ್ನೊಳಗೊಂಡ ತನಿಖಾ ತಂಡ ರಚಿಸಲಾಗಿತ್ತು. ಆರೋಪಿಯನ್ನು ಬಂಧಿಸಿ 7,61,500 ರೂ. ನಗದು ಮತ್ತು ಮೊಬೈಲ್ ಜಪ್ತಿ ಮಾಡಿದ್ದಾರೆ.