7.16 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ

14manju1a-Web
ಬೈಲಹೊಂಗಲ ತಾಲೂಕಿನ ನೇಸರಗಿ ಹೋಬಳಿ ವ್ಯಾಪ್ತಿಯಲ್ಲಿ ರೈತರು ಬಿತ್ತನೆಗೆ ಭೂಮಿ ಹದಗೊಳಿಸಿರುವುದು.
Published on

ಬೆಳಗಾವಿ: ಈ ಬಾರಿ ಮುಂಗಾರು ಹಂಗಾಮಿನ ಪೂರ್ವದಲ್ಲಿಯೇ ಅಲ್ಲಲ್ಲಿ ಮಳೆ ಸುರಿಯುತ್ತಿದ್ದು, ಕೃಷಿ ಇಲಾಖೆಯು 7.16 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಂಡಿದೆ. ಇದರಿಂದ ಈ ವರ್ಷ ಬಿತ್ತನೆ ಪ್ರದೇಶ ಸುಮಾರು 48 ಸಾವಿರ ಹೆಕ್ಟೇರ್ ಹೆಚ್ಚಳವಾದಂತಾಗಿದೆ.

ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ 6.86 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ, ಮಳೆ ಅಭಾವ, ಭೂಮಿಯಲ್ಲಿ ತೇವಾಂಶ ಕಡಿಮೆ ಇನ್ನಿತರ ಕಾರಣಗಳಿಂದ ಸುಮಾರು 5.92 ಲಕ್ಷ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿತ್ತು. ಅಲ್ಲದೆ, ಬಿತ್ತನೆಯಾದ ಬಳಿಕ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದಿರುವ ಕಾರಣ ಕೆಲ ಬೆಳೆಗಳು ಮೊಳಕೆ ಹಾಗೂ ಕಾಳು ಕಟ್ಟುವ ಹಂತದಲ್ಲಿಯೇ ಒಣಗಿದ್ದವು. ಈ ಕಾರಣದಿಂದಾಗಿ ರೈತರು ಮುಂಗಾರು ಹಂಗಾಮಿನ ಮಳೆಗಳ ಬಗ್ಗೆ ಆತಂಕದಲ್ಲಿದ್ದರು. ಆದರೆ, ಇದೀಗ ಮೇ ಆರಂಭದಲ್ಲಿಯೇ ಮಳೆ ಸುರಿಯುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ತರಹೇವಾರಿ ಬೀಜ ಬಿತ್ತನೆ: ಜಿಲ್ಲೆಯಲ್ಲಿ ಮೇ ಮೊದಲ ವಾರದಲ್ಲಿಯೇ ಮಳೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬರೋಬ್ಬರಿ 7.16 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದೆ. ಅದರಲ್ಲಿ ಕಬ್ಬು, ತಂಬಾಕು ಬೆಳೆ ಹೊರತುಪಡಿಸಿ ಪ್ರಮುಖ 11,140 ಹೆಕ್ಟೇರ್‌ನಲ್ಲಿ ತೊಗರಿ, 710 ಹೆಕ್ಟೇರ್‌ನಲ್ಲಿ ಹುರುಳಿ, 38,300 ಹೆಕ್ಟೇರ್‌ನಲ್ಲಿ ಹೆಸರು, 26,155 ಹೆಕ್ಟೇರ್‌ನಲ್ಲಿ ಶೇಂಗಾ, 4605 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ, 1.20ಲಕ್ಷ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, 10 ಸಾವಿರ ಹೆಕ್ಟೇರ್ಸ ಜ್ಜೆ, 98,140 ಹೆಕ್ಟೇರ್ ಪ್ರದೇಶದಲ್ಲಿ ಸೋಯಾ ಅವರೆ, 36,830 ಹೆಕ್ಟೇರ್‌ನಲ್ಲಿ ಹತ್ತಿ, 3020 ಹೆಕ್ಟೇರ್‌ನಲ್ಲಿ ಸಿರಿಧಾನ್ಯ ಬಿಜ ಬಿತ್ತನೆಯಾಗಲಿವೆ.

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಬೆಳೆಗಳು ಮತ್ತು ಧಾನ್ಯಗಳ ಬಿತ್ತನೆ ಪ್ರದೇಶ 20 ಸಾವಿರ ಹೆಕ್ಟೇರ್‌ನಷ್ಟು ಏರಿಕೆ ಕಂಡಿದೆ. ಮತ್ತೊಂದೆಡೆ ವಾಣಿಜ್ಯ ಬೆಳೆಯಾದ ಕಬ್ಬಿನ ಪ್ರದೇಶ 58 ಸಾವಿರ ಹೆಕ್ಟೇರ್‌ಗೆ ಏರಿಕೆ ಕಂಡಿದೆ. ಅಲ್ಲದೆ ಮಳೆಯಾಶ್ರಿತ ಕೃಷಿ ಭೂಮಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಒಂದೇ ವರ್ಷದ ಅವಧಿಯಲ್ಲಿ 14 ಸಾವಿರ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶ ನೀರಾವರಿಗೆ ಒಳಪಟ್ಟಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸಬ್ಸಿಡಿ ಬದಲಾಗಿ ಉಚಿತ ಬೀಜ-ಗೊಬ್ಬರ ನೀಡಿ

ಕೇಂದ್ರ ಮತ್ತು ರಾಜ್ಯ ಸರ್ಕಾರವು ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಸಂದರ್ಭದಲ್ಲಿ ಬೀಜ, ರಸಗೊಬ್ಬರಗಳ ಖರೀದಿ ಮೇಲೆ ಸಬ್ಸಿಡಿ ನೀಡುತ್ತಿದೆ. ಆದರೆ, ಕೋವಿಡ್-19, ಲಾಕ್‌ಡೌನ್, ದರ ಕುಸಿತ, ಕಾರ್ಮಿಕರ ಕೂಲಿ ಹೆಚ್ಚಳ ಇನ್ನಿತರ ಕಾರಣಗಳಿಂದ ರೈತರು ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಾಗಾಗಿ ಸರ್ಕಾರವು ಈ ವರ್ಷ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಉಚಿತವಾಗಿ ನೀಡಲು ಕ್ರಮ ವಹಿಸಬೇಕು. ಇದರಿಂದ ಸಣ್ಣ ಮತ್ತು ಮಧ್ಯಮ ಗಾತ್ರದ ರೈತರಿಗೆ ಅನುಕೂಲವಾಗಲಿದೆ ಎಂದು ಎಂದು ಮಳೆಯಾಶ್ರಿತ ಪ್ರದೇಶದ ರೈತರಾದ ವೆಂಕಪ್ಪ ಹೊಸೂರ, ಹನುಮಂತ ಗೌಡರ ವಿನಂತಿಸಿದ್ದಾರೆ.

ಮುಂಗಾರು ಹಂಗಾಮಿನ ಪೂರ್ವದಲ್ಲಿಯೇ ಮಳೆ ಸುರಿಯುತ್ತಿರುವುದರಿಂದ ಈ ವರ್ಷ ಬಿತ್ತನೆ ಪ್ರದೇಶ ಹೆಚ್ಚಳವಾಗಲಿದೆ. ಬೀಜ, ರಸಗೊಬ್ಬರ ಕೊರತೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.| ಶಿವನಗೌಡ ಪಾಟೀಲ ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ

| ಮಂಜುನಾಥ ಕೋಳಿಗುಡ್ಡ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net